ಬೆಳಗಾವಿ : ಬಸ್ ಕಂಡಕ್ಟರ್ ಮೇಲೆ MES ಪುಂಡರ ಹಲ್ಲೆ ವಿಚಾರ ರಾಜಕೀಯ ಜಟಾಪಟಿಗೂ ಕಾರಣವಾಗಿದೆ. ಇದೀಗ ಲಕ್ಷ್ಮೀ ಹೆಬ್ಬಾಳ್ಕರ್ ಮಾಡಿದ ಭಾಷಣ ಹೊಸ ಚರ್ಚೆಗೆ ಗ್ರಾಸವಾಗಿದ್ದು , ಕರವೇ ರಾಜ್ಯಾಧ್ಯಕ್ಷ ನಾರಾಯನಗೌಡ ಸರಿಯಾಗಿ ಚಾಟಿ ಬೀಸಿದ್ದಾರೆ.
ನಾರಾಯಣಗೌಡ ಎಕ್ಸ್ ಖಾತೆಯಲ್ಲಿ ಸಾಲು ಸಾಲು ಪ್ರಶ್ನೆ ಕೇಳಿದ್ದು , ಲಕ್ಷ್ಮೀ ಹೆಬ್ಬಾಳ್ಕರ್ ನಡೆ ವಿರುದ್ಧ ಆಕ್ರೋಶ ಅಲ್ಲದೆ ಕನ್ನಡಿಗರ ಪರ ನಿಲ್ಲುವಂತೆ ಒತ್ತಾಯಿಸಿದ್ದಾರೆ.
ನಾರಾಯಣಗೌಡ ಟ್ವೀಟ್ ನಲ್ಲಿ ಏನಿದೆ..?
ಲಕ್ಷ್ಮೀ ಹೆಬ್ಬಾಳ್ಕರ್ ಅವರೇ , ತಾವು ಸೌಹಾರ್ದ, ಸೋದರತ್ವದ ಅಗತ್ಯದ ಬಗ್ಗೆ ಹೇಳಿದ್ದೀರಿ. ನಾವೆಲ್ಲರೂ ಭಾರತೀಯರು ಎಂದು ಒತ್ತಿ ಹೇಳಿದ್ದೀರಿ.ಕನ್ನಡಿಗರು ಮೊದಲಿನಿಂದಲೂ ಸೌಹಾರ್ದಪ್ರಿಯರು, ಕಾಲು ಕೆರೆದುಕೊಂಡು ಯಾರೊಂದಿಗೂ ಜಗಳಕ್ಕೆ ನಿಲ್ಲುವವರಲ್ಲ. ಇದೆಲ್ಲ ಮಾತುಗಳು ಭಾಷೆಯ ಹೆಸರಿನಲ್ಲಿ ಪುಂಡಾಟಿಕೆ ಮಾಡುವ ಭಾಷಾಂಧ ಮರಾಠಿಗಳಿಗೆ ಮಾತ್ರ ಅನ್ವಯಿಸುತ್ತದೆ ಎಂದಿದ್ದಾರೆ.
ನೀವೇ ಬಹಿರಂಗವಾಗಿ ಹೇಳಿದಂತೆ ಬಸ್ ನಿರ್ವಾಹಕರ ಮೇಲೆ ಅಲ್ಲಿನ ಸಿಪಿಐ ಹಿರಿಯ ಅಧಿಕಾರಿಗಳ ಗಮನಕ್ಕೆ ತರದೆ ರಾತ್ರೋರಾತ್ರಿ ಪೋಕ್ಸೋ ಕಾಯ್ದೆಯಡಿ ದೂರು ದಾಖಲಿಸಿಕೊಂಡಿದ್ದಾರೆ.
ನೀವೇ ಹೇಳುವಂತೆ ಸಿಪಿಐ ತಪ್ಪು ಎಸಗಿದ್ದಾರೆ. ಹೀಗಿರುವಾಗ ಸಿಪಿಐ ವಿರುದ್ಧ ಯಾವ ಕ್ರಮ ಕೈಗೊಂಡಿದ್ದೀರಿ? ನಿರ್ವಾಹಕರ ಮೇಲೆ ದಾಖಲಾದ ಪ್ರಕರಣವನ್ನು ಯಾಕೆ ಇನ್ನೂ ರದ್ದುಪಡಿಸಿಲ್ಲ. ಈ ಕಣ್ಣೊರೆಸುವ ಮಾತುಗಳನ್ನು ಯಾಕೆ ಆಡುತ್ತಿದ್ದೀರಿ?
ನನ್ನ ಕ್ಷೇತ್ರದಲ್ಲಿ ಮರಾಠಿಗರು ನನಗೆ ಮತ ನೀಡಿ ಗೆಲ್ಲಿಸಿದ್ದಾರೆ ಎಂದು ನಿಮ್ಮ ಮಾಧ್ಯಮ ಹೇಳಿಕೆಯಲ್ಲಿ ಹೇಳಿದ್ದೀರಿ. ಕನ್ನಡಿಗರು ನಿಮಗೆ ಮತ ನೀಡಿಲ್ಲವೇ? ಅವರು ನಿಮ್ಮ ಗೆಲುವಿಗೆ ಕಾರಣರಲ್ಲವೇ? ಕೇವಲ ಮರಾಠಿಗರ ಮತಗಳಿಂದ ನೀವು ಗೆದ್ದಿದ್ದೀರೆ?
ಸರಿಯನ್ನು ಸರಿ, ತಪ್ಪನ್ನು ತಪ್ಪು ಎಂದು ಹೇಳಲು ಇಷ್ಟೆಲ್ಲ ಸರ್ಕಸ್ ಮಾಡಬೇಕಿಲ್ಲ. ನಿಮ್ಮ ಮೌನದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಎದ್ದ ನಂತರ ನಿರ್ವಾಹಕರ ಮೇಲಿನ ಹಲ್ಲೆಯನ್ನು ಖಂಡಿಸಿದ್ದೀರಿ. ನೀವು ಯಾರನ್ನೋ ಓಲೈಸಲು ಒದ್ದಾಡುತ್ತಿದ್ದೀರಿ ಎಂಬುದು ಸ್ಪಷ್ಟವಲ್ಲವೇ? ಎಂದು ಕಿಡಿಕಾರಿದ್ದಾರೆ.
ಘಟನೆ ನಡೆದ ಬಾಳೇಕುಂದ್ರಿಯಲ್ಲೇ ಮರಾಠಿಗರ ಒಂದು ಕಾರ್ಯಕ್ರಮವೊಂದರಲ್ಲಿ ತಾವು ಭಾಗವಹಿಸಿದ್ದನ್ನು ಗಮನಿಸಿದೆ. ಆ ಕಾರ್ಯಕ್ರಮದ ಬ್ಯಾನರ್ ನಲ್ಲಿ ಒಂದಕ್ಷರ ಕನ್ನಡವಿಲ್ಲ. ನಾನೂ ಕೂಡ ಭಾಷಾಭಿಮಾನಿ ಎಂದು ಹೇಳಿಕೊಳ್ಳುವ ತಾವು, ಬ್ಯಾನರ್ ನಲ್ಲಿ ಕನ್ನಡವೇಕಿಲ್ಲ ಎಂದು ಪ್ರಶ್ನೆ ಮಾಡಿದ್ದೀರಾ? ಖಂಡಿತ ಇಲ್ಲ, ಮರಾಠಿಗರ ಓಟಿನೆದುರು ನಿಮ್ಮ ಭಾಷಾಭಿಮಾನ ಸೋತು ಹೋಗಿರಬಹುದು ಎಂದು ಕಿಡಿಕಾರಿದ್ದಾರೆ




