ಬೆಳಗಾವಿ: -ಸಚಿವ ಸಂತೋಷ ಲಾಡ್ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅತ್ಯಂತ ಹಗುರವಾಗಿ ಮಾತನಾಡಿದ್ದು, ಇದು ಖಂಡನೀಯ ಎಂದು ಕರ್ನಾಟಕ ಕ್ಷತ್ರೀಯ ಮರಾಠಾ ಪರಿಷತ್ ಬೆಳಗಾವಿ ತಾಲೂಕು ಅಧ್ಯಕ್ಷ ಬಸವರಾಜ ಮ್ಯಾಗೋಟಿ ಹೇಳಿದ್ದಾರೆ.
ಈ ಕುರಿತು ಅವರು ಹೇಳಿಕೆ ಬಿಡುಗಡೆ ಮಾಡಿದ್ದಾರೆ. ವಿಜಯೇಂದ್ರ ಮಾಧ್ಯಮದವರ ಮುಂದೆ ಸಚಿವ ಸಂತೋಷ ಲಾಡ್ ಬಗ್ಗೆ ತೀರಾ ಹಗುರವಾಗಿ ಮಾತನಾಡಿದ್ದಾರೆ, ಇದು ಖಂಡನೀಯ. ಸಂತೋಷ ಲಾಡ್ ಒಬ್ಬ ಸಚಿವ ಹಾಗೂ ಮರಾಠಾ ಸಮಾಜದ ಮುಖಂಡರು. ಬಿಜೆಪಿಯ ಅಧ್ಯಕ್ಷ ಮರಾಠಾ ಸಮಾಜದ ಹಿರಿಯರಿಗೆ ಈ ರೀತಿ ಅವಾಚ್ಯ ಶಬ್ದದಿಂದ ನಿಂದಿಸಿದ್ದು ಇಡೀ ಮರಾಠಾ ಸಮಾಜಕ್ಕೆ ಅವಮಾನ ಮಾಡಿದ ಹಾಗೆ. ಮತ್ತು ಇಡೀ ಬಿಜೆಪಿ ಸಮುದಾಯವೇ ಮರಾಠಾ ಸಮುದಾಯಕ್ಕೆ ವಿರುದ್ಧ ಇದ್ದ ಹಾಗೆ ಎಂದು ಅವರು ಹೇಳಿದ್ದಾರೆ.
ಛತ್ರಪತಿ ಶಿವಾಜಿ ಮಹಾರಾಜರ ವಂಶಸ್ಥರು ನಾವು. ಶಿವಾಜಿ ಮಹಾರಾಜರು ಇಡೀ ಮಾನವ ಕುಲದ ಒಳಿತಿಗಾಗಿ ಹೋರಾಡಿದವರು. ಅದು ನಮ್ಮ ರಕ್ತದಲ್ಲಿಯೂ ಹರಿದಾಡುತ್ತಿದೆ. ಸಂತೋಷ ಲಾಡ್ ಪ್ರತಿನಿಧಿಸುತ್ತಿರುವ ಕ್ಷೇತ್ರಕ್ಕೆ ಒಮ್ಮೆ ಬಂದು ಜನರ ಅಭಿಪ್ರಾಯ ಆಲಿಸಿದರೆ, ಅವರು ಮಾಡುತ್ತಿರುವ ಜನ ಸೇವೆ ನಿಮಗೆ ಗೊತ್ತಾಗುತ್ತದೆ. ಸರ್ಕಾರದಿಂದ ಸಿಗುತ್ತಿರುವ ಅನುದಾನಗಳನ್ನು ಮೀರಿ ತಮ್ಮ ಸ್ವಂತ ಹಣದಲ್ಲಿ ಯಾವ ಯಾವ ರೀತಿಯಲ್ಲಿ ಜನರ ಅವಶ್ಯಕತೆಗಳನ್ನು ಪೂರೈಸುತ್ತದ್ದಾರೆ ಎಂಬುದು ನಿಮಗೆ ಅರ್ಥವಾಗುತ್ತದೆ ಎಂದು ಮ್ಯಾಗೋಟಿ ತಿಳಿಸಿದ್ದಾರೆ.
ಪ್ರಕೃತಿ ವಿಕೋಪದಿಂದ ಬೇರೆ ಬೇರೆ ಸ್ಥಳಗಳಲ್ಲಿ ರಾಜ್ಯದ ಜನರು ಸಂಕಷ್ಟದಲ್ಲಿ ಸಿಲುಕಿದಾಗ ಸರ್ಕಾರದ ಪ್ರತಿನಿಧಿಯಾಗಿ ಕನ್ನಡಿಗರನ್ನು ಸುರಕ್ಷಿತವಾಗಿ ತವರು ನಾಡಿಗೆ ಕರೆತಂದ ಸಾಕಷ್ಟು ಉದಾಹರಣೆಗಳು ನಮ್ಮ ಕಣ್ಣ ಮುಂದೆ ಇವೆ. ಮಕ್ಕಳು ಸಂಸ್ಕಾರವಂತರಾಗಬೇಕಾದರೆ, ತಂದೆ ತಾಯಿಯ ಪಾತ್ರ ಬಹು ಮುಖ್ಯ. ವಿಜಯೇಂದ್ರಗೆ ತಂದೆ- ತಾಯಿಯ ಕಡೆಯಿಂದ ಸಂಸ್ಕಾರ ಸಿಕ್ಕಿಲ್ಲ ಅನಿಸುತ್ತದೆ. ರಾಜ್ಯದ ಮುಖ್ಯಮಂತ್ರಿಯಾಗಿದ್ದ, ಸಾಕಷ್ಟು ವಸಂತಗಳನ್ನು ಪೂರೈಸಿದ ಯಡಿಯೂರಪ್ಪ ಕ್ಷಮೆ ಕೇಳಬೇಕು. ಇಲ್ಲವಾದರೆ ಇಡೀ ಮರಾಠಾ ಸಮಾಜ ಬಿಜೆಪಿ ವಿರುದ್ಧ ಕೆಲಸ ಮಾಡಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.
ಭಾರತ ಮಾತೆ ಎಲ್ಲ ಧರ್ಮ, ಎಲ್ಲ ಜಾತಿಯವರನ್ನು ತನ್ನ ಮಕ್ಕಳಂತೆ ಉದರದಲ್ಲಿ ಇಟ್ಟುಕೊಂಡು ರಕ್ಷಣೆ ಮಾಡುತ್ತಿರುವಾಗ ಇಂಥ ದುಷ್ಟರಿಂದ ಪ್ರಮಾದವಾಗುತ್ತಿದೆ. ಬಾಯಿ ತೆಗೆದರೆ ಸಾಕು, ಜಾತಿ -ಧರ್ಮ ಒಡೆದು ಚೂರು ಚೂರು ಮಾಡುವ ಮಾತುಗಳೇ ಹೊರಬರುತ್ತವೆ. ಜವಾಬ್ದಾರಿ ಸ್ಥಾನದಲ್ಲಿರುವವರು ಯೋಚನೆ ಮಾಡಿ ಅಳೆದು ತೂಗಿ ಮಾತನಾಡಬೇಕು. ನಾಡಿನ ಪ್ರತಿಯೊಬ್ಬರ ಪ್ರತಿನಿಧಿಯಾಗಬೇಕೇ ಹೊರತು ಯಾವುದೇ ಒಂದು ಸಮುದಾಯವನ್ನು ಹೀಯಾಳಿಸುವಂತವರಾಗಬಾರದು. ಬೆಳಗಾವಿ ತಾಲೂಕಿನ ಕ್ಷತ್ರೀಯ ಮರಾಠಾ ಪರಿಷತ್ ವತಿಯಿಂದ ಈ ವಿಷಯವನ್ನು ಚರ್ಚಿಸಿ, ಹೋರಾಟವನ್ನು ಮಾಡುತ್ತೇವೆ ಎಂದು ಅವರು ತಿಳಿಸಿದ್ದಾರೆ.
ವರದ ಪ್ರತೀಕ ಚಿಟಗಿ