
ಸಿರುಗುಪ್ಪ : ನಗರದ ಸಿ.ಡಿ.ಪಿ.ಓ ಕಛೇರಿಯ ಸಭಾಂಗಣದಲ್ಲಿ ತಾಲೂಕಾಡಳಿತ ಹಾಗೂ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳ ಸಹಯೋಗದಲ್ಲಿ ನಡೆದ ಶ್ರೀ ಶಿವಶರಣ ಹಡಪದ ಅಪ್ಪಣ್ಣ ಜಯಂತ್ಯೋತ್ಸವ ಸಮಾರಂಭವನ್ನು ತಹಶೀಲ್ದಾರ್ ಗೌಸಿಯಾ ಬೇಗಂ ಅವರು ಉದ್ಘಾಟಿಸಿದರು.
ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಮಲ್ಲಿಕಾರ್ಜುನ ಅವರು ಸರ್ಕಾರವು ಸಮಾಜದ ಕಟ್ಟಕಡೆಯಲ್ಲಿರುವ ಎಲ್ಲಾ ಜಾತಿಗಳಿಗೂ ಸಮಾನತೆ ದೊರಕಿಸುವ ನಿಟ್ಟಿನಲ್ಲಿ ಆಯಾ ಜನಾಂಗದ ಸುಮಾರು 46 ಜನ ದಾರ್ಶನಿಕರನ್ನು ಗುರುತುಪಡಿಸಿ ಜಯಂತ್ಯೋತ್ಸವವನ್ನು ಆಚರಿಸುತ್ತಿದೆ.
ಅದರಂತೆ ನಾವೆಲ್ಲರೂ ಎಲ್ಲಾ ತತ್ವಜ್ಞಾನಿಗಳು, ಶರಣರು, ದಾರ್ಶನಿಕರು, ಸಮಾಜದ ಹಿತ ಚಿಂತಕರನ್ನು ನಾವೆಲ್ಲಾ ಸ್ಮರಿಸಬೇಕೆಂದು ಪ್ರಾಸ್ತಾವಿಕವಾಗಿ ಮಾತನಾಡಿದರು
ಸಮಾರಂಭದಲ್ಲಿ ಹಡಪದ ಸಮಾಜದ ಗೌರವಾಧ್ಯಕ್ಷ ಹೆಚ್.ಕೆ.ನಾಗರಾಜ ಅಧ್ಯಕ್ಷ ವೀರೇಶ ಅವರು ಮಾತನಾಡಿ ನಮ್ಮ ಜನಾಂಗ ಆರ್ಥಿಕವಾಗಿ ಹಿಂದುಳಿದಿದ್ದು, ಶುಭ ಸಮಾರಂಭಗಳಿಗೆ ತಾಲೂಕು ಕೇಂದ್ರದಲ್ಲಿ ಒಂದು ಭವನವನ್ನು ನಿರ್ಮಿಸಿಕೊಡಬೇಕೆಂದು ತಹಶೀಲ್ದಾರರಲ್ಲಿ ಮನವಿ ಮಾಡಿದರು.
ಅಲ್ಲದೇ ಕಾರ್ಯಕ್ರಮದಲ್ಲಿ ಕೆಲವೇ ಕೆಲವು ಇಲಾಖೆಗಳ ಅಧಿಕಾರಿಗಳು ಹಾಜರಾಗಿದ್ದನ್ನು ಗಮನಿಸಿ ಜಯಂತಿ ಆಚರಣೆಯಲ್ಲಿ ಅಸಡ್ಡೆ ತೋರುತ್ತಿರುವ ಬಗ್ಗೆಯು ಬೇಸರ ವ್ಯಕ್ತಪಡಿಸಿದರು. ಮುಂದಿನ ದಿನಗಳಲ್ಲಿ ಈಗಾಗದಂತೆ ಗಮನವಹಿಸಬೇಕು ಎಂದು ತಿಳಿಸಿದರು.
ಬಸವೇಶ್ವರ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಜಡೆಪ್ಪ ಅವರು ತಮ್ಮ ವಿಶೇಷ ಉಪನ್ಯಾಸದಲ್ಲಿ ಶ್ರೀ ಶಿವಶರಣ ಹಡಪದ ಅಪ್ಪಣ್ಣನವರ ಜೀವನ ಚರಿತ್ರೆ, ಅವರ ವಚನ ಸಾಹಿತ್ಯದ ತಿರುಳನ್ನು ಕಾರ್ಯಕ್ರಮದಲ್ಲಿ ನೆರೆದಿದ್ದ ಮುಖಂಡರಿಗೆ ತಿಳಿಸಿದರು.
ಇದೇ ವೇಳೆ ಉಪ ತಹಶೀಲ್ದಾರ್ ಸಿದ್ದಾರ್ಥ್ ಕಾರಂಜಿ, ಹಡಪದ ಸಮಾಜದ ಉಪಾಧ್ಯಕ್ಷ ಬಸವರಾಜ್ ಸೇರಿದಂತೆ ಹಡಪದ ಸಮಾಜದವರು ಹಾಗೂ ಇನ್ನಿತರ ಇಲಾಖೆಗಳ ಸಿಬ್ಬಂದಿಗಳು ಇದ್ದರು.
ವರದಿ : ಶ್ರೀನಿವಾಸ ನಾಯ್ಕ




