ಸಿರುಗುಪ್ಪ : ನಗರದ ತಹಶೀಲ್ದಾರ್ ಕಛೇರಿಯಲ್ಲಿ ಸೂಕ್ತ ಸಮಯಕ್ಕೆ ಬಸ್ ವ್ಯವಸ್ಥೆ ಕಲ್ಪಿಸಬೇಕೆಂದು ಅರಳಿಗನೂರು ಪಪ್ಪನಹಾಳ್ ಗ್ರಾಮದ ವಿದ್ಯಾರ್ಥಿಗಳು ಆಗ್ರಹಿಸಿ ಗ್ರೇಡ್-2 ತಹಶೀಲ್ದಾರ್ ಸತ್ಯಮ್ಮ ಅವರಿಗೆ ಮನವಿ ಸಲ್ಲಿಸಿದರು.
ವಿದ್ಯಾರ್ಥಿನಿಯರಾದ ನಂದಿನಿ, ಗಂಗಮ್ಮ, ಚಂದ್ರಿಕಾ ಮಾತನಾಡಿ ಅರಳಿಗನೂರು ಮತ್ತು ಪಪ್ಪನಹಾಳ್ ಗ್ರಾಮದಿಂದ ಪದವೀಧರ, ಪಿಯುಸಿ, ಪ್ರೌಡಶಾಲೆಗಳ ಉನ್ನತ ವಿದ್ಯಾಭ್ಯಾಸಕ್ಕೆ ನೂರಾರು ವಿದ್ಯಾರ್ಥಿಗಳು ನಗರಕ್ಕೆ ಪ್ರತಿನಿತ್ಯ ಆಗಮಿಸುತ್ತಿದ್ದು, ಸೂಕ್ತ ಸಮಯಕ್ಕೆ ಬಸ್ ವ್ಯವಸ್ಥೆಯಿಲ್ಲದ ಕಾರಣ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ.
ಸುಮಾರು 150ಕ್ಕೂ ಅಧಿಕ ವಿದ್ಯಾರ್ಥಿಗಳು ಒಂದೇ ಬಸ್ಸಿಗೆ ಪ್ರಯಾಣ ಸುತ್ತಿದ್ದು, 8ಗಂಟೆಗೆ ಬರುವ ಬಸ್ಸು ಜನನಿಬಿಡದಿಂದ ಕೂಡಿರುತ್ತದೆ. ಬಸ್ಸಿನಲ್ಲಿ ಜೋತಾಡುವಂತಾಗಿದೆ. ಆದಕಾರಣ ವಿದ್ಯಾರ್ಥಿನಿಯರನ್ನು ಶಾಲೆಗೆ ಕಳಿಸಲು ಪೋಷಕರು ಹಿಂದೇಟು ಹಾಕುತ್ತಿದ್ದಾರೆ.
ಇದರಿಂದಾಗಿ ನಮ್ಮ ಶೈಕ್ಷಣಿಕ ಜೀವನಕ್ಕೆ ಸಂಚಕಾರವುಂಟಾಗುವ ಭೀತಿಯಿದೆ. ಹಳೇ ಬಸ್ಸುಗಳನ್ನು ನಮ್ಮ ಗ್ರಾಮಕ್ಕೆ ಕಳಿಸಲಾಗುತ್ತಿದ್ದು, ಎಲ್ಲೆಂದರಲ್ಲಿ ಕೆಟ್ಟು ನಿಲ್ಲುತ್ತಿವೆ. ಬೆಳಗಿನ ಜಾವದ ತರಗತಿಗೆ ಗೈರು ಹಾಜರಾಗುತ್ತಿದ್ದೇವೆ. ಆದ್ದರಿಂದ ನಮ್ಮ ಶಿಕ್ಷಣ ಹಾಗೂ ಪಲಿತಾಂಶ ಹಿನ್ನಡೆಯಾಗುತ್ತಿದೆ.
ಆದ್ದರಿಂದ ಬೆಳಗಿನ ಜಾವದ ವೇಳೆ 7ಗಂಟೆಗೆ ಎರಡು ಬಸ್ಸುಗಳನ್ನು ಕಳಿಸಿ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಪ್ರಯಾಣದ ಅನುಕೂಲ ಮಾಡಬೇಕೆಂದು ಒತ್ತಾಯಿಸಿದರು.
ಗ್ರೇಡ್-2 ತಹಶೀಲ್ದಾರ್ ಸತ್ಯಮ್ಮ ಮಾತನಾಡಿ ನಿಮ್ಮ ಸಮಸ್ಯೆಗಳ ಬಗ್ಗೆ ಸಂಬಂದಿಸಿದ ಅಧಿಕಾರಿಗಳ ಗಮನಕ್ಕೆ ತಂದು ಸಮರ್ಪಕ ಬಸ್ ಸಂಚಾರದ ವ್ಯವಸ್ಥೆ ಮಾಡಿಕೊಡಲಾಗುವುದೆಂದು ತಿಳಿಸಿದರು.
ಇದೇ ವೇಳೆ ಸಮಾಜ ಸೇವಕ ನರಸಪ್ಪ, ವಿದ್ಯಾರ್ಥಿಗಳಾದ ಸಂಗೀತಾ, ರೋಹಿಣ , ತೇಜಶ್ವಿನಿ, ಶ್ವೇತಾ, ಶಾಂತಿ, ಯಶೋದಾ, ಉಷಾ, ವೀರೇಶ, ಶೇಖರ್, ಗೋಪಾಲ್, ವೆಂಕಟೇಶ್, ಬಾಲಾಜಿ ಮೋಹನ್, ಜಯಂತ್, ರೇಖಾ, ಇನ್ನಿತರರಿದ್ದರು.
ವರದಿ : ಶ್ರೀನಿವಾಸ ನಾಯ್ಕ