ಗುರುಮಠಕಲ್ : ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ವಾಸಿಸುವ ಹಿರಿಯ ನಾಗರಿಕರು, ಅಂಗವಿಕಲರು ಹಾಗೂ ವಿಧವಾ ಪಿಂಚಣಿ ಪಡೆಯುವ ಫಲಾನುಭವಿಗಳು ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಅವುಗಳನ್ನು ತಕ್ಷಣ ಪರಿಹರಿಸಬೇಕೆಂದು ದಲಿತ ಸಂಘರ್ಷ ಸಮಿತಿ (ಡಿಎಸ್‌ಎಸ್) ಗುರುಮಠಕಲ್ ತಾಲೂಕು ಅಧ್ಯಕ್ಷ ಲಾಲಪ್ಪ ತಲಾರಿ ಅವರು ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.
60 ವರ್ಷ ವಯಸ್ಸು ಪೂರ್ಣಗೊಳಿಸಿದ ಹಲವಾರು ಹಿರಿಯ ನಾಗರಿಕರಿಗೆ ಮಾಸಿಕ ಪಿಂಚಣಿ ಸೌಲಭ್ಯ ಲಭ್ಯವಾಗಿಲ್ಲ. ಕೆಲವರಿಗೆ ಮಾತ್ರ ಪಿಂಚಣಿ ದೊರೆತಿದ್ದು, ಇನ್ನೂ ಅನೇಕ ಅರ್ಹ ಫಲಾನುಭವಿಗಳಿಗೆ ಪಿಂಚಣಿ ಬಂದಿಲ್ಲ ಎಂದು ಅವರು ಅಳಲು ತೋಡಿಕೊಂಡಿದ್ದಾರೆ ಎಂದು ಲಾಲಪ್ಪ ತಲಾರಿ ಹೇಳಿದರು.
ಇದೇ ರೀತಿ ಅಂಗವಿಕಲರು ಹಾಗೂ ವಿಧವಾ ಪಿಂಚಣಿಗೆ ಸಂಬಂಧಿಸಿದ ಸಮಸ್ಯೆಗಳು ಕೂಡ ತೀವ್ರವಾಗಿವೆ. ಹಲವಾರು ಫಲಾನುಭವಿಗಳು ವಯಸ್ಸು ಹಾಗೂ ಅನಾರೋಗ್ಯದ ಕಾರಣ ತಹಸೀಲ್ದಾರ್ ಕಚೇರಿಗೆ ಸ್ವತಃ ಬರುವ ಸ್ಥಿತಿಯಲ್ಲಿ ಇಲ್ಲದಿರುವುದರಿಂದ, ಗ್ರಾಮಲೆಖಾಧಿಕಾರಿಗಳು ಮನೆಮನೆಗೆ ತೆರಳಿ ದಾಖಲೆಗಳ ಪರಿಶೀಲನೆ ನಡೆಸಿ ಪಿಂಚಣಿ ಸೌಲಭ್ಯ ಒದಗಿಸಬೇಕೆಂದು ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕೃಷ್ಣ ದಾಸರಿ, ಆಕಾಶ್ ಬ್ಯಾಗರಿ, ರಾಮಕೃಷ್ಣ ಸೈದಪೋಳ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ವರದಿ : ರವಿ ಬುರನೋಳ್




