ತುರುವೇಕೆರೆ: –2024-25 ನೇ ಸಾಲಿನಲ್ಲಿ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಸೂಕ್ಷ್ಮ ಹನಿ ನೀರಾವರಿ ಘಟಕಗಳನ್ನು ಅಡಿಕೆ ಬೆಳೆ ಹೊರತುಪಡಿಸಿ ಇತರೆ ತೋಟಗಾರಿಕಾ ಬೆಳೆಗಳಿಗೆ ಅಳವಡಿಸಲು ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದು ಹಿರಿಯ ತೋಟಗಾರಿಕೆ ಸಹಾಯಕ ನಿರ್ದೇಶಕ ಆಂಜನೇಯ ರೆಡ್ಡಿ ತಿಳಿಸಿದರು.
ಕೃಷಿ ಸಿಂಚಾಯಿ ಯೋಜನೆಯಡಿ ಸೂಕ್ಷ್ಮ ಹನಿ ನೀರಾವರಿ ಘಟಕಗಳನ್ನು ಸ್ಥಾಪಿಸುವುದರಿಂದ ರೈತರಿಗೆ ನೀರಿನ ಸಮರ್ಪಕ ಬಳಕೆಯೊಂದಿಗೆ ಕಡಿಮೆ ಖರ್ಚಿನಲ್ಲಿ ಅಧಿಕ ಇಳುವರಿ ಪಡೆದು ಅವರ ಆರ್ಥಿಕ ಮಟ್ಟ ಸುಧಾರಿಸಲು ಸಹಕಾರಿಯಾಗಿರುತ್ತದೆ. ಈ ಯೋಜನೆಯಡಿ ಎಲ್ಲಾ ವರ್ಗದ ರೈತರು ಅರ್ಜಿ ಸಲ್ಲಿಸಬಹುದಾಗಿದೆ. ಹನಿ ನೀರಾವರಿ ಅಳವಡಿಕೆಗೆ ಬಹುವಾರ್ಷಿಕ ಬೆಳೆಗಳಿಗೆ ಪ್ರತಿ ಫಲಾನುಭವಿಗೆ ಗರಿಷ್ಠ 5 ಹೆಕ್ಟೇರ್ ಪ್ರದೇಶದವರೆಗೆ ಹಾಗೂ ತರಕಾರಿ ಮತ್ತು ವಾಣಿಜ್ಯ ಹೂ ಬೆಳೆಗೆ ಗರಿಷ್ಟ 2 ಹೆಕ್ಟೇರ್ ಪ್ರದೇಶದವರೆಗೆ ಸಹಾಯಧನ ನೀಡಲಾಗುತ್ತದೆ.
ಭಾರತ ಸರ್ಕಾರದ ಮಾರ್ಗಸೂಚಿ ಅನ್ವಯ ಮೊದಲ 2 ಹೆಕ್ಟೇರ್ ಪ್ರದೇಶದವರೆಗೆ ಎಲ್ಲಾ ವರ್ಗದ ರೈತರಿಗೆ ಶೇ. 90 ಹಾಗೂ ನಂತರ 3 ಹೆಕ್ಟೇರ್ ವರೆಗೆ ಶೇ.45 ರಷ್ಟು ಸಹಾಯಧನ ನೀಡಲಾಗುವುದು. ತೋಟಗಾರಿಕೆ ಇಲಾಖೆಯಿಂದ ಅನುಮೋದನೆಗೊಂಡಿರುವ ಕಂಪನಿಗಳಿಂದ ಮಾತ್ರ ಹನಿ ನೀರಾವರಿ ಘಟಕಗಳನ್ನು ಅಳವಡಿಸಿಕೊಳ್ಳುವುದ ಕಡ್ಡಾಯವಾಗಿದೆ ಎಂದರು.
2024-25 ನೇ ಸಾಲಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ತೋಟಗಾರಿಕೆ ಬೆಳೆ ಬೆಳೆಯುವ ರೈತರಿಗೆ ಎನ್.ಆರ್.ಇ.ಜಿ. ಯೋಜನೆಯಲ್ಲಿ ಪ್ರೋತ್ಸಾಹ ಧನ ನೀಡುತ್ತಿದ್ದು, ತಾಲ್ಲೂಕಿನ ರೈತರು ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ ಪ್ರೋತ್ಸಾಹ ಧನ ಪಡೆಯಬಹುದಾಗಿದೆ. ಈ ಯೋಜನೆಯಲ್ಲಿ ಅಡಿಕೆಯನ್ನು ಹೊರತುಪಡಿಸಿ ತೆಂಗು, ಸೀಬೆ, ದಾಳಿಂಬೆ, ಮಾವು, ಸಪೋಟ, ಹುಣಸೆ, ನಿಂಬೆ, ಡ್ರಾಗನ್ ಫ್ರೂಟ್, ಗುಲಾಬಿ, ಹಲಸು, ಕೋಕೋ, ಬಾಳೆ, ಪಪ್ಪಾಯಿ ಬೆಳೆಗಳನ್ನು ಮುಖ್ಯ ಬೆಳೆಗಳಾಗಿ ಬೆಳೆಯಬಹುದಾಗಿದೆ ಎಂದರು.
ಈ ಯೋಜನೆಗಳಡಿ ಸೌಲಭ್ಯ ಪಡೆಯಲು ಇಚ್ಛಿಸುವ ರೈತರು, ಫಲಾನುಭವಿಗಳು ಸೂಕ್ತ ದಾಖಲೆಗಳೊಂದಿಗೆ ತೋಟಗಾರಿಕೆ ಇಲಾಖೆಗೆ ಅರ್ಜಿ ಸಲ್ಲಿಸಿ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ. ಹೆಚ್ಚಿನ ವಿವರಗಳಿಗೆ ಸಹಾಯಕ ತೋಟಗಾರಿಕೆ ಅಧಿಕಾರಿ ಕಸಬಾ ಮತ್ತು ದಂಡಿನಶಿವರ: 9480158831, ಮಾಯಸಂದ್ರ: 9964941890 ಮತ್ತು ದಬ್ಬೇಘಟ್ಟ 9110206683 ಗೆ ಸಂಪರ್ಕಿಸಲು ಹಿರಿಯ ತೋಟಗಾರಿಕೆ ಸಹಾಯಕ ನಿರ್ದೇಶಕ ಆಂಜನೇಯ ರೆಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ: -ಗಿರೀಶ್ ಕೆ ಭಟ್