ಸಿರುಗುಪ್ಪ : –ನಗರದ ತಾಲೂಕು ಕಛೇರಿ ಸಭಾಂಗಣದಲ್ಲಿ ಮತದಾನ ಪೂರ್ವ ಸಿದ್ದತೆ ಕುರಿತು ಸಹಾಯಕ ಚುನಾವಣಾಧಿಕಾರಿ ಡಾ.ತಿರುಮಲೇಶ ಅವರು ರವಿವಾರದಂದು ಸುದ್ದಿಗೋಷ್ಠಿ ನಡೆಸಿದರು.
ಸುದ್ದಿಗಾರರೊಂದಿಗೆ ಮಾತನಾಡಿ ಮೇ.7ರಂದು ನಡೆಯುವ ಮತಗಟ್ಟೆಗಳಲ್ಲಿ ಅಗತ್ಯ ಮೂಲಭೂತ ಸೌಲಭ್ಯಗಳಾದ ವಿದ್ಯುತ್, ರ‍್ಯಾಂಪ್, ಶೌಚಾಲಯ, ಕುಡಿಯುವ ನೀರು ವ್ಯವಸ್ಥೆಯನ್ನು ಸೆಕ್ಟರ್ ಅಧಿಕಾರಿಗಳ ಮೂಲಕ ಹಾಗೂ ಸ್ಥಳೀಯ ಅಧಿಕಾರಿಗಳ ಮೂಲಕ ವ್ಯವಸ್ಥೆ ಮಾಡಿರುವ ಬಗ್ಗೆ ಮಾಹಿತಿ ಪಡೆಯಲಾಗಿದೆ.
ಸಿರುಗುಪ್ಪ ವಿದಾನಸಭಾ ಕ್ಷೇತ್ರಕ್ಕೆ ನೇಮಕವಾಗಿರುವ ಜನರಲ್ ವೀಕ್ಷಣಾಧಿಕಾರಿಗಳು ಬಂದು ಚೆಕ್ ಪೋಸ್ಟ್ ವ್ಯಾಪ್ತಿಯಲ್ಲಿ ಪರಿಶೀಲನೆ ನಡೆಸಿರುತ್ತಾರೆ. ನಮ್ಮಲ್ಲಿ ಮನೆ ಮನೆ ಮತದಾನಕ್ಕಾಗಿ 20 ಜನ ಅರ್ಜಿ ಸಲ್ಲಿಸಿದ್ದು, ಆ 20 ಮತದಾರರ ಮನೆಗೆ ತೆರಳಿ ಮತವನ್ನು ಸಂಗ್ರಹಿಸಿ ಅವುಗಳನ್ನು ಭದ್ರತಾ ಕೊಠಡಿಯಲ್ಲಿ ಇರಿಸಲಾಗಿದೆ.
ತಾಲೂಕಿನಲ್ಲಿ 32 ಸೂಕ್ಷ್ಮ, 12 ಅತಿ ಸೂಕ್ಷ್ಮ ಮತಗಟ್ಟೆಗಳಿವೆ. ಚುನಾವಣೆಯ ಮತದಾನ ಕಾರ್ಯದಲ್ಲಿ ಪೋಲೀಸ್ ಹೊರತುಪಡಿಸಿ 1051 ಸಿಬ್ಬಂದಿಗಳು ಕಾರ್ಯನಿರ್ವಹಿಸಲಿದ್ದಾರೆ. ಮತದಾರರು ಯಾವುದೇ ಆಮಿಷಗೊಳಗಾಗಬಾರದು.
228 ಮತಗಟ್ಟೆಗಳಿಗೆ ಮತಯಂತ್ರಗಳನ್ನು ಸಿಬ್ಬಂದಿಗಳು ಹಾಗೂ ಪೋಲೀಸ್ ಬಿಗಿಭದ್ರತೆಯಲ್ಲಿ ಬಸ್‌ಗಳು, ಮಿನಿಬಸ್‌ಗಳು, ಜೀಪ್‌ಗಳ ಮೂಲಕ ತಲುಪಿಸಲಾಗುವುದು. ಮತದಾನದ ದಿನದ ಬೆಳಿಗ್ಗೆ ಚುನಾವಣೆಗೆ 20 ಅಭ್ಯರ್ಥಿಗಳು ಸ್ಪರ್ಧಿಸಿರುವುದರಿಂದ ತಲಾ 3ರಂತೆ 60 ಅಣಕು ಮತಗಳನ್ನು ಏಜೆಂಟ್‌ಗಳಿಂದ ಹಾಕಿಸಿ ಪದರ್ಶನ ಮಾಡಲಾಗುತ್ತದೆ.
ಸಂಜೆ ಮತದಾನ ಕೊನೆಗೊಂಡ ನಂತರ ಎಲ್ಲಾ ಇವಿಎಂ ಯಂತ್ರಗಳನ್ನು ಪೋಲೀಸ್ ಬಿಗಿಭದ್ರತೆಯಲ್ಲಿ ಕೊಪ್ಪಳದ ಗವಿಸಿದ್ದೇಶ್ವರ ಕಾಲೇಜಿನಲ್ಲಿನ ಭದ್ರತಾ ಕೊಠಡಿಯ ಅಧಿಕಾರಿಗಳ ಸುಪರ್ದಿಗೆ ವಹಿಸಲಾಗುವುದೆಂದು ತಿಳಿಸಿದರು.
ಇದೇ ವೇಳೆ ತಹಶೀಲ್ದಾರ್ ಶಂಷಾಲಂ ಇದ್ದರು.
ವರದಿ ಶ್ರೀನಿವಾಸ ನಾಯ್ಕ