ವಿಜಯಪುರ : ಕಾನೂನು ಬಾಹೀರ ಚಟುವಟಿಕೆ ಮಾಡುವವರು ಚಾಪೆಯ ಕೆಳಗೆ ತೂರಿದರೆ ಪೊಲೀಸರು ರಂಗೋಲಿ ಕೆಳಗೆ ತೂರುತ್ತಾರೆಂಬ ಮಾತಿದೆ. ಇಷ್ಟರ ಮಧ್ಯೆ ಅದೆಷ್ಟೋ ಕದೀಮರು ಖಾಕಿ ಕಣ್ಣಿಗೆ ಮಣ್ಣೆರೆಚಿ ಪಾರಾಗಿ ಹೋಗಿರುತ್ತಾರೆ.
ಆದರೆ ಒಂದಲ್ಲಾ ಒಂದು ದಿನ ಖಾಕಿ ಬೆಲೆಗೆ ಸಿಕ್ಕಿ ಹಾಕಿಕೊಳ್ಳುತ್ತಾರೆ. ಇಂತಹ ಒಂದು ಪ್ರಕರಣಕ್ಕೆ ಸಾಕ್ಷಿಯಾಗಿದೆ ವಿಜಯಪುರದಲ್ಲಿ ನಡೆದ ಒಂದು ಪ್ರಕರಣ. ಕಳೆದ 21 ವರ್ಷಗಳ ಹಿಂದಿನ ಪ್ರಕರಣದಲ್ಲಿ ಶಿಕ್ಷೆಯಾಗಿದ್ದರೂ ಪರಾರಿಯಾಗಿ ತಲೆ ಮರೆಸಿಕೊಂಡ ವ್ಯಕ್ತಿಯನ್ನು ಇದೀಗ ವಿಜಯಪುರ ಜಿಲ್ಲಾ ಪೊಲೀಸರು ಬಂಧಿಸಿದ್ಧಾರೆ.
ಈ ಪ್ರಕರಣದ ಮೇಲೆ ಕಣ್ಣಿಟ್ಟಿದ್ದ ಗಾಂಧಿಚೌಕ್ ಪೊಲೀಸರು 21 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ರಾಜೂ ಉರ್ಫ್ ಬಸವರಾಜ ನಾಯಕನನ್ನು ಪತ್ತೆ ಮಾಡಿ ಬಂಧಿಸಿದ್ದಾರೆ.
ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ರಾಮನಾಳ ಗ್ರಾಮದಲ್ಲಿ ಜಮೀನೊಂದಲ್ಲಿ ತನ್ನ ಹೆಸರು ವಿಳಾಸ ಬದಲಾವಣೆ ಮಾಡಿಕೊಂಡು ಕೆಲಸ ಮಾಡಿಕೊಂಡಿದ್ದ. ಈ ವಿಚಾರ ಪತ್ತೆ ಮಾಡಿದ ಗಾಂಧಿಚೌಕ್ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಪ್ರದೀಪ್ ತಳಕೇರಿ ಹಾಗೂ ಇತರೆ ಸಿಬ್ಬಂದಿ ಅಪರಾಧಿ ರಾಜೂ ಉರ್ಪ್ ಬಸವರಾಜ ನಾಯಕನನ್ನು ಬಂಧಿಸಿ ಕರೆ ತಂದಿದ್ದಾರೆ. ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ಹಾಜರು ಮಾಡಿದ್ದಾರೆ. ಇನ್ಸಪೆಕ್ಟರ್ ಪ್ರದೀಪ್ ತಳಕೇರಿ ಕಾರ್ಯಕ್ಕೆ ಎಸ್ಪಿ ಋಷಿಕೇಶ ಸೋನೆವಣೆ ಹಾಗೂ ಇತರೆ ಅಧಿಕಾರಿಗಳು ಶ್ಲಾಘಿಸಿದ್ದಾರೆ.