ಬೆಂಗಳೂರು: ಪ್ರತ್ಯೇಕ ಪ್ರಕರಣಗಳಲ್ಲಿ ಐಪಿಎಲ್ ಕ್ರಿಕೆಟ್ ಮೇಲೆ ಬೆಟ್ಟಿಂಗ್‌ನಲ್ಲಿ ತೊಡಗಿದ್ದ ಮೂವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಧೃವ್ ಮಿತ್ತಲ್, ರೋಹಿತ್ ರಂಜನ್ ಹಾಗೂ ವಿಜಯ್ ಕುಮಾರ್ ಬಂಧಿತರು. ಆರೋಪಿಗಳಿಂದ ನಗದು, ಬೆಟ್ಟಿಂಗ್ ಟೋಕನ್ಸ್ ಸೇರಿದಂತೆ ಒಟ್ಟು 85 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಎಪ್ರಿಲ್ 10ರಂದು ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯದ ಮೇಲೆ ಆರೋಪಿಗಳು ಬೆಟ್ಟಿಂಗ್‌ನಲ್ಲಿ ತೊಡಗಿದ್ದರು. ಆರೋಪಿ ಧೃವ್ ಮಿತ್ತಲ್ ಆನ್‌ಲೈನ್ ಬೆಟ್ಟಿಂಗ್ ಆಡಿಸುತ್ತಿದ್ದ. ಆತನಿಂದ 2 ಮೊಬೈಲ್ ಫೋನ್ಗಳು, ಗೇಮಿಂಗ್ ಆ್ಯಪ್‌ನಲ್ಲಿದ್ದ ಸುಮಾರು 63 ಲಕ್ಷ ರೂ. ಟೋಕನ್ಸ್, ಖಾತೆಯಲ್ಲಿದ್ದ 13 ಲಕ್ಷ ಹಣ ಸೇರಿದಂತೆ 75 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಇನ್ನೊಂದೆಡೆ, ಆನ್‌ಲೈನ್‌ನಲ್ಲಿ ಬೆಟ್ಟಿಂಗ್ ನಡೆಸುತ್ತಿದ್ದ ಜಕ್ಕೂರಿನ ವಿಜಯ್ ಕುಮಾರ್ ಎಂಬಾತನನ್ನು ಬಂಧಿಸಿ 10 ಲಕ್ಷ ರೂ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬಾಲ್ ಟು ಬಾಲ್ ಬೆಟ್ಟಿಂಗ್: ಪಂದ್ಯದ ಸಂದರ್ಭದಲ್ಲಿ ಮೈದಾನದಲ್ಲಿ ಕುಳಿತು ಬಾಲ್ ಟು ಬಾಲ್ ಮಾಹಿತಿಯನ್ನು ಪಂಟರ್‌ಗಳಿಗೆ ರವಾನಿಸುತ್ತಿದ್ದ ರೋಹಿತ್ ರಂಜನ್ ಎಂಬ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಸಾಮಾನ್ಯವಾಗಿ ಮೈದಾನದಲ್ಲಿನ ಲೈವ್ ಪಂದ್ಯಕ್ಕೂ ಹಾಗೂ ನೇರಪ್ರಸಾರಕ್ಕೂ 40-50 ಸೆಕೆಂಡ್‌ಗಳ ಅಂತರವಿರುತ್ತದೆ. ಇದನ್ನೇ ಬಂಡವಾಳ ಮಾಡಿಕೊಳ್ಳುತ್ತಿದ್ದ ಆರೋಪಿಗಳು ಬಾಲ್ ಟು ಬಾಲ್ ಬೆಟ್ಟಿಂಗ್ ಮಾಡಿಸಿ ಹಣ ಗಳಿಸುತ್ತಿದ್ದರು. ಆರೋಪಿ ರೋಹಿತ್ ರಂಜನ್ ಮೈದಾನದಲ್ಲಿ ಕುಳಿತು ಬೆಟ್ಟಿಂಗ್ ಆಡಿಸುವ ಪಂಟರ್‌ಗಳಿಗೆ ಮಾಹಿತಿ ನೀಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.