ಬೆಂಗಳೂರು: ತಾಯಿಯೊಂದಿಗೆ ಆಟೋದಲ್ಲಿ ತೆರಳುತ್ತಿದ್ದ ಅಪ್ರಾಪ್ತೆಯರನ್ನು ಚುಡಾಯಿಸಿದ್ದ ಇಬ್ಬರು ಆರೋಪಿಗಳನ್ನು ಕುಮಾರಸ್ವಾಮಿ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬನಶಂಕರಿ ನಿವಾಸಿಗಳಾದ ಮುಬಾರಕ್ ಮತ್ತು ಹಫೀಫ್ ಬಂಧಿತ ಆರೋಪಿಗಳು. ಬಾಲಕಿಯರ ತಾಯಿ ನೀಡಿದ್ದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿದ್ದ ಕುಮಾರಸ್ವಾಮಿ ಲೇಔಟ್ ಪೊಲೀಸರು ಆರೋಪಿಗಳನ್ನು ಬಂಧಿಸಿರುವುದಾಗಿ ತಿಳಿಸಿದ್ದಾರೆ.
ದೂರುದಾರ ಮಹಿಳೆ ಏಪ್ರಿಲ್ 23ರಂದು ತನ್ನ ಇಬ್ಬರು ಮಕ್ಕಳೊಂದಿಗೆ ಆಟೋದಲ್ಲಿ ಸಾಗುತ್ತಿದ್ದಾಗ ಸಾರಕ್ಕಿ ಮಾರುಕಟ್ಟೆ ಬಳಿ ಸ್ಕೂಟರ್‌ನಲ್ಲಿ ಬಂದ ಆರೋಪಿಗಳು ಅಡ್ಡಗಟ್ಟಿದ್ದರು. ಇಬ್ಬರು ಬಾಲಕಿಯರನ್ನು ಚುಡಾಯಿಸಿದ್ದಲ್ಲದೆ ಅಸಭ್ಯವಾಗಿ ಮಾತನಾಡಲಾರಂಭಿಸಿದ್ದರು. ಆರೋಪಿಗಳನ್ನು ಪ್ರಶ್ನಿಸಿದ ಆಟೋ ಚಾಲಕನನ್ನು ಅವಾಚ್ಯವಾಗಿ ನಿಂದಿಸಿದ್ದರು. ಬಳಿಕ ದೂರುದಾರ ಮಹಿಳೆ ಆರೋಪಿಗಳನ್ನು ಪ್ರಶ್ನಿಸಿದಾಗ ಆಕೆಯನ್ನೂ ಅವಾಚ್ಯವಾಗಿ ನಿಂದಿಸುತ್ತಾ, ಅಸಭ್ಯವಾಗಿ ವರ್ತಿಸಿದ್ದರು. ನಂತರ ಜೀವ ಬೆದರಿಕೆ ಹಾಕಿ ಸ್ಥಳದಿಂದ ತೆರಳಿದ್ದರು ಎಂದು ದೂರಿನಲ್ಲಿ ಸಂತ್ರಸ್ತೆಯರ ತಾಯಿ ಉಲ್ಲೇಖಿಸಿದ್ದರು ಎಂದು ವರದಿಯಾಗಿದೆ.
ಆರೋಪಿಗಳ ವರ್ತನೆಯಿಂದ ನೊಂದ ಮಹಿಳೆ ಕುಮಾರಸ್ವಾಮಿ ಲೇಔಟ್ ಠಾಣೆಗೆ ದೂರು ನೀಡಿದ್ದರು. ಎಫ್ಐಆರ್ ದಾಖಲಿಸಿಕೊಂಡಿದ್ದ ಪೊಲೀಸರು ಇಬ್ಬರೂ ಆರೋಪಿಗಳನ್ನು ಪತ್ತೆಹಚ್ಚಿ ಹೆಡೆಮುರಿಕಟ್ಟಿದ್ದಾರೆ.