ಬೆಳಗಾವಿ: ಸ್ವಪಕ್ಷದ ನಾಯಕರ ವಿರುದ್ಧವೇ ಸಿಡಿದೆದ್ದಿರುವ ಬಿಜೆಪಿ ರೆಬಲ್ ನಾಯಕರು ಬೆಳಗಾವಿ ಹೊರವಲಯದ ಖಾಸಗಿ ರೆಸಾರ್ಟ್ ನಲ್ಲಿ ರಹಸ್ಯ ಸಭೆ ನಡೆಸಿದ್ದು, ತೀವ್ರ ಕುತೂಹಲ ಮೂಡಿಸಿದೆ.
ಸಭೆ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ಅರವಿಂದ್ ಲಿಂಬಾವಳಿ, ನಮ್ಮದು ಬಂಡಾಯ ಸಭೆಯಲ್ಲ.ಬಿಜೆಪಿ ಬಲವರ್ಧನೆಗಾಗಿ ನಡೆಸುತ್ತಿರುವ ಸಭೆಯಾಗಿದೆ ಎಂದು ಹೇಳಿದ್ದಾರೆ.
ಮಾಧ್ಯಮಗಳಲ್ಲಿ ಬಂಡಾಯದ ಸಭೆ ಎಂದು ವರದಿಯಾಗುತ್ತಿದೆ. ನಾವು ಪಕ್ಷದ ವಿರುದ್ಧ ಬಂಡಾಯವೆದ್ದಿಲ್ಲ. ವಿಧಾನಸಭೆ ಚುನಾವಣೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಯಾಗಿದೆ. ಹಾಗಾಗಿ ಪಕ್ಷದ ಬಲವರ್ಧನೆಗೆ ಸಭೆ ನಡೆಸಿ ಚರ್ಚಿಸಿದ್ದೇವೆ. ಪಕ್ಷದಲ್ಲಿನ ಲೋಪದೋಷ ಸರಿಪಡಿಸಿಕೊಂಡು ಹೋಗುವ ನಿಟ್ಟಿನಲ್ಲಿ ಚರ್ಚಿಸಿದ್ದೇವೆ ಎಂದರು.
ಈಗಾಗಲೇ ಮುಡಾ ಹಗರಣದ ವಿಚಾರವಾಗಿ ಸರ್ಕಾರದ ವಿರುದ್ಧ ಪಾದಯಾತ್ರೆ ನಡೆಸಲಾಗಿದೆ. ಅದೇ ರೀತಿ ವಾಲ್ಮೀಕಿ ನಿಗಮದಲ್ಲಿನ ಭ್ರಷ್ಟಾಚಾರದ ವಿಚಾರವಾಗಿಯೂ ಪಾದಯಾತ್ರೆ ನಡೆಸುವ ನಿಟ್ಟಿನಲ್ಲಿ ಸಮಾಲೋಚನೆ ನಡೆಸಿದ್ದು, ಈ ಬಗ್ಗೆ ಹೈಕಮಾಂಡ್ ಜೊತೆ ಮಾತುಕತೆ ನಡೆಸುವುದಾಗಿ ಹೇಳಿದರು.
ಬಿಜೆಪಿ ರೆಬಲ್ ನಾಯಕರ ಗೌಪ್ಯ ಸಭೆಯಲ್ಲಿ ಶಾಸಕರಾದ ಯತ್ನಾಳ್, ರಮೇಶ್ ಜಾರಕಿಹೊಳಿ, ಎನ್.ಆರ್.ಸಂತೋಷ್, ಅರವಿಂದ ಲಿಂಬಾವಳಿ, ಪ್ರತಾಪ್ ಸಿಂಹ, ಕುಮಾರ್ ಬಂಗಾರಪ್ಪ, ಜಿ.ಎಂ.ಸಿದ್ದೇಶ್ವರ್, ಅಣ್ಣಾಸಾಹೇಬ ಜೊಲ್ಲೆ ಸೇರಿದಂತೆ ಹತ್ತಕ್ಕೂ ಹೆಚ್ಚು ನಾಯಕರು ಉಪಸ್ಥಿತರಿದ್ದರು.