ಬೆಂಗಳೂರು : ಸಚಿವ ಶಿವಾನಂದ ಎಸ್.ಪಾಟೀಲ್ ಅವರು ನಿಯಮದ ಪ್ರಕಾರ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ ಎಂದು ಸ್ಪೀಕರ್ ಯು.ಟಿ.ಖಾದರ್ ಅವರು ಸ್ಪಷ್ಟಪಡಿಸಿದರು.
ಬಿಜೆಪಿಯಿಂದ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಶಿವಾನಂದ ಅವರಿಗೆ ಹಾಕಿದ್ದ ಸವಾಲಿನಂತೆ, ಶಾಸಕ ಸ್ಥಾನಕ್ಕೆ ರಾಜೀನಾಮೆ ಪತ್ರವನ್ನು ಇಂದು ಸ್ಪೀಕರ್ ಅವರಿಗೆ ಸಲ್ಲಿಸಿದ್ದರು..
ಈ ಕುರಿತು ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಖಾದರ್ ಅವರು, ಶಿವನಾನಂದ ಪಾಟೀಲ್ ನನ್ನನ್ನು ಭೇಟಿ ಮಾಡಿದ್ದಾರೆ. ಶಾಸಕ ಸ್ಥಾನಕ್ಕೆ ಯ್ನಾಳ್ ರಾಜೀನಾಮೆ ಕೊಟ್ಟರೆ, ಆಮೇಲೆ ನನ್ನ ರಾಜೀನಾಮೆ ಅಂಗೀಕರಿಸಿ ಎಂದು ಶಿವಾನಂದ ಹೇಳಿದ್ದಾಗಿ ಸ್ಪೀಕರ್ ತಿಳಿಸಿದರು.
ಯತ್ನಾಳ್ ವಿರುದ್ಧ ಸ್ಪರ್ಧಿಸಿ ಗೆಲ್ಲುತ್ತೇನೆ ಅಂದಿದ್ದಾರೆ. ನಿಯಮದ ಪ್ರಕಾರ ಅವರು ರಾಜೀನಾಮೆ ನೀಡಿಲ್ಲ. ಅಸೆಂಬ್ಲಿ ನಿಯಮದನ್ವಯ ರಾಜೀನಾಮೆ ಸ್ವೀಕಾರಕ್ಕೆ ಅರ್ಹವಲ್ಲ. ಹಾಗಾಗಿ ರಾಜೀನಾಮೆ ಅಂಗೀಕರಿಸಿಲ್ಲ ಎಂದರು ಹೇಳಿದರು.
ಯತ್ನಾಳ್ ಹಾಕಿದ ಸವಾಲು ಸ್ವೀಕರಿಸಿದ್ದೇನೆ. ಅದರಂತೆ, ವಿಧಾನ ಸಭೆಯ ಸಭಾಧ್ಯಕ್ಷರಿಗೆ ರಾಜೀನಾಮೆಯನ್ನೂ ಸಲ್ಲಿಸಿದ್ದೇನೆ. ಇದೊಂದು ಸತ್ವ ಪರೀಕ್ಷೆ ಆಗಿಯೇ ಬಿಡಲಿ. ಇದು ಕೇವಲ ನನ್ನ ಅಸ್ತಿತ್ವದ ಪ್ರಶ್ನೆಯಲ್ಲ. ನಮ್ಮ ಬಸವನ ಬಾಗೇವಾಡಿ ಮತಕ್ಷೇತ್ರದ ಮಹಾಜನತೆಯ ಸ್ವಾಭಿಮಾನದ ಪ್ರಶ್ನೆ.
ನಾನು ಇವತ್ತು ಈ ನಿರ್ಧಾರ ಮಾಡಿರದಿದ್ದರೆ ಅದು ನನ್ನ ಮತದಾರರಿಗೆ ಮಾಡುವ ಅವಮಾನವಾಗುತ್ತಿತ್ತು. ಹೀಗಾಗಿ ಯತ್ನಾಳ್ ಅವರು ಹಾಕಿದ ಸವಾಲು ಸ್ವೀಕರಿಸಿ, ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ. ನೀವು ಯಾವಾಗ ರಾಜೀನಾಮೆ ಸಲ್ಲಿಸುತ್ತೀರಿ ಎಂದು ಯತ್ನಾಳ್ ಅವರಿಗೆ ಶಿವಾನಂದ್ ಪ್ರಶ್ನಿಸಿದ್ದು ಗೊತ್ತೇ ಇದೆ.