ರಾಮದುರ್ಗ : ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಎಂಎಲ್‌ಬಿಸಿ ಆವರಣದಲ್ಲಿ ಅಗ್ನಿಶಾಮಕ ಠಾಣೆಗೆ ನೂತನವಾಗಿ ನಿರ್ಮಿಸಿದ ಕಟ್ಟಡ ಸಂಕೀರ್ಣ ಉದ್ಘಾಟಿಸಿ ಮಾತನಾಡಿದ ಅವರು, ಇಲಾಖೆಯ ಸಿಬ್ಬಂದಿ ದಿನದ 24 ಘಂಟೆಗಳ ಕಾಲ ಸಂಪೂರ್ಣ ಜಾಗೃತರಾಗಿರಬೇಕು. ಅಗ್ನಿ ಅವಘಡಗಳು ನಡೆಯುವುದಕ್ಕೆ ಸಮಯ ಸಂದರ್ಭಗಳು ಇರುವುದಿಲ್ಲ. ತಮ್ಮ ಕಾರ್ಯಾಲಯಕ್ಕೆ ಕರೆ ಬಂದ ತಕ್ಷಣ ಆದಷ್ಟು ಬೇಗ ಸ್ಥಳಕ್ಕೆ ಆಗಮಿಸಿದಲ್ಲಿ ಮಾತ್ರ ಅಧಿಕ ಅನಾಹುತ ತಪ್ಪಿಸಲು ಸಾಧ್ಯವಿದೆ ಎಂದರು.
ಅಗ್ನಿ ಅವಘಡಗಳು ಸಂಭವಿಸಿದಾಗ ಇಲಾಖೆಯ ಸಿಬ್ಬಂದಿ ಶೀಘ್ರ ಸ್ಥಳಕ್ಕೆ ದೌಡಾಯಿಸಿ, ಸಾರ್ವಜನಿಕರಿಗೆ ಆಗುವ ಅನಾಹುತಗಳನ್ನು ತಪ್ಪಿಸಲು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ದುರಂತಕ್ಕೆ ದೌಡಾಯಿಸುವ ಸಂದರ್ಭದಲ್ಲಿ ಪೊಲೀಸ್ ಇಲಾಖೆಯ ಸಹಾಯ ಪಡೆದುಕೊಂಡು ರಸ್ತೆಗಳು ಜಾಮ್ ಆಗದಂತೆ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕು ಎಂದು ವಿಧಾನಸಭೆ ಮುಖ್ಯ ಸಚೇತಕ ಹಾಗೂ ಶಾಸಕ ಅಶೋಕ ಪಟ್ಟಣ ಹೇಳಿದರು.
ದುರಂತಗಳು ನಡೆದ ನಂತರ ಹೋದಲ್ಲಿ ಯಾವುದೇ ಪ್ರಯೋಜನವಿಲ್ಲ ಎಂದು ಇಲಾಖೆಯ ಸಿಬ್ಬಂದಿ ಹಾಗೂ ಅಧಿಕಾರಿಗಳು ಮೊದಲು ಅರಿತುಕೊಳ್ಳಬೇಕು. ಅನಾಹುತಗಳನ್ನು ತಪ್ಪಿಸಿದಲ್ಲಿ ಮಾತ್ರ ಸಾರ್ವಜನಿಕರಿಂದ ಅಗ್ನಿಶಾಮಕ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಮೆಚ್ಚುಗೆ ದೊರೆಯಲು ಸಾಧ್ಯವಿದೆ.
ಸರಕಾರದ ಉದ್ದೇಶಗಳ ಇಡೇರಿಕೆಗೂ ಸಿಬ್ಬಂದಿ ಶ್ರಮಿಸಬೇಕು ಎಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಅಗ್ನಿಶಾಮಕ ಠಾಣೆಯ ಆವರಣದಲ್ಲಿ ಸಸಿ ನೆಟ್ಟು, ನೀರುಣಿಸುವ ಮೂಲಕ ಪರಿಸರ ಪ್ರಜ್ಞೆ ಕುರಿತು ಅಶೋಕ ಪಟ್ಟಣ ಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ಹುಬ್ಬಳ್ಳಿ ಪ್ರಾದೇಶಿಕ ಅಗ್ನಿಶಾಮಕ ಠಾಣೆಯ ಅಧಿಕಾರಿ ಮಂಜುನಾಥ ಸಾಲಿ, ಬೆಳಗಾವಿ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಶಶಿಧರ ನೀಲಗಾರ, ಧಾರವಾಡ ಅಗ್ನಿಶಾಮಕ ಅಧಿಕಾರಿ ಗೋವಿಂದಪ್ಪ ತೊರಣಗಟ್ಟಿ, ಮುರಗೋಡ ಠಾಣಾಧಿಕಾರಿ ಬಸವರಾಜ ಕರಲಿಂಗನವರ, ಸವದತ್ತಿ ಠಾಣಾಧಿಕಾರಿ ಮಹಾಂತೇಶಯ್ಯ ಗೋಕಾಕ, ರಾಮದುರ್ಗ ಠಾಣಾಧಿಕಾರಿ ಎಂ.ಎಂ. ಕವಡಿ, ಸಹಾಯಕ ಠಾಣಾಧಿಕಾರಿ ಟಿ.ಡಿ. ವಡ್ಡರ ಸೇರಿದಂತೆ ಇತರರು ಉಪಸ್ಥಿತರಿದ್ದರು.
ವರದಿ : ಮಂಜುನಾಥ ಕಲಾದಗಿ




