ನ್ಯೂಯಾರ್ಕ್: ಭಾರತ ಮೂಲದ ವಿದ್ಯಾರ್ಥಿನಿ ಸುದೀಕ್ಷಾ ಕೊನಂಕಿ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಷಕರ ಆಕ್ರಂದನ ಮುಂದುವರೆದಿದ್ದು, ಕನಿಷ್ಟ ಪಕ್ಷ ತಮ್ಮ ಮಗಳು ಸತ್ತಿದ್ದಾಳೆ ಎಂದಾದರೂ ಘೋಷಣೆ ಮಾಡಿ ಎಂದು ಡೊಮಿನಿಕಾ ಸರ್ಕಾರಕ್ಕೆ ಕೇಳಿದ್ದಾರೆ.
ಪಿಟ್ಸ್‌ಬರ್ಗ್ ವಿಶ್ವವಿದ್ಯಾಲಯದಲ್ಲಿ ಭಾರತ ಮೂಲದ ಸುದಿಕ್ಷಾ ಕೊನಂಕಿ ವ್ಯಾಸಂಗ ಮಾಡುತ್ತಿದ್ದರು. ಮಾರ್ಚ್ 6ರಂದು ರಜೆ ನಿಮಿತ್ತ ಐವರು ಗೆಳೆಯರ ಜೊತೆ ಕಡಲ ತೀರದ ಡೊಮಿನಿಕನ್ ರಿಪಬ್ಲಿಕ್‌ಗೆ ಆಗಮಿಸಿದ್ದರು.
ಅಂದು ರಾತ್ರಿ ಅವರು ನಾಪತ್ತೆಯಾಗಿದ್ದರು. ಸುದಿಕ್ಷಾ ನಾಪತ್ತೆಯಾಗಿ 11 ದಿನಗಳು ಕಳೆದಿದ್ದು ಆಕೆಯನ್ನು ಪೊಲೀಸರು ಹುಡುಕುತ್ತಿದ್ದಾರೆ. ಸುದಿಕ್ಷಾ ಜೊತೆ ಹೋಗಿದ್ದ ನಾಲ್ವರು ಗೆಳೆಯರ ಪೈಕಿ ಜೋಷುವಾ ರೀಬೆ ಎಂಬ ವ್ಯಕ್ತಿಯನ್ನು ಬಂಧಿಸಿದ್ದು ಆತನ ವಿಚಾರಣೆ ನಡೆಸುತ್ತಿದ್ದಾರೆ.
ಮಗಳ ಹತ್ಯೆ ಕುರಿತು ಪೋಷಕರ ಶಂಕೆ: ಇನ್ನು ಸುದಿಕ್ಷಾಳನ್ನು ಹತ್ಯೆ ಮಾಡಿರಬಹುದು ಎಂದು ಆಕೆಯ ಪೋಷಕರು ಶಂಕೆ ವ್ಯಕ್ತಪಡಿಸಿದ್ದಾರೆ. ಆದರೆ ಡೊಮೆನಿಕಾದ ಸ್ಥಳೀಯ ಪೊಲೀಸರು ಸುದಿಕ್ಷಾ ಸಮುದ್ರದಲ್ಲಿ ಮುಳುಗಿರುವ ಸಾಧ್ಯತೆ ಇದೆ ಎಂದು ಸಂದೇಹ ವ್ಯಕ್ತಪಡಿಸಿದ್ದಾರೆ. ಆದರೆ ಸತತ ಶೋಧ ಕಾರ್ಯಾಚರಣೆ ಹೊರತಾಗಿಯೂ ಆಕೆಯ ದೇಹ ಪತ್ತೆಯಾಗಿಲ್ಲ.
ಈ ಕುರಿತು ಮಾತನಾಡಿರುವ ಡೊಮಿನಿಕನ್ ರಿಪಬ್ಲಿಕ್ ರಾಷ್ಟ್ರೀಯ ಪೊಲೀಸ್ ವಕ್ತಾರ ಡಿಯಾಗೋ ಪೆಸ್ಕ್ವೇರಾ, ಸುದಿಕ್ಷಾ ಕೊನಂಕಿ ಅವರ ಕುಟುಂಬವು ಆಕೆ ಸತ್ತಿದ್ದಾಳೆ ಎಂದು ಘೋಷಿಸುವಂತೆ ಮನವಿ ಪತ್ರ ನೀಡಿದೆ. ಆದರೆ ಈ ಮನವಿಗೆ ಸರ್ಕಾರ ಇನ್ನೂ ಉತ್ತರ ನೀಡಿಲ್ಲ ಎಂದು ಹೇಳಿದ್ದಾರೆ.
ಏತನ್ಮಧ್ಯೆ, ಡೊಮಿನಿಕನ್ ರಿಪಬ್ಲಿಕ್‌ನ ಅಧಿಕಾರಿಗಳು ಸುದಿಕ್ಷಾರ ಸ್ನೇಹಿತ ರೈಬೆ ಪಾಸ್‌ಪೋರ್ಟ್ ಅನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ ಈ ಪ್ರಕರಣದಲ್ಲಿ ರೈಬೆ ಅವರನ್ನು ಶಂಕಿತ ಎಂದು ಪರಿಗಣಿಸಲಾಗಿಲ್ಲ. ಅವರ ಮೇಲೆ ಯಾವುದೇ ತಪ್ಪು ಆರೋಪ ಹೊರಿಸಲಾಗಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ.