ಬೆಳಗಾವಿ: ಪಾಕಿಸ್ತಾನದ ಉಗ್ರರ ನೆಲೆಗಳ ಮೇಲೆ ಭಾರತೀಯ ಸೇನೆ ದಾಳಿ ಮಾಡಿ ಉಗ್ರರ ಮಾರಣಹೋಮ ಮಾಡಿರುವ ಹಿನ್ನೆಲೆಯಲ್ಲಿ ಮಾಜಿ ಸೈನಿಕರ ಸಂಘ, ಬಿಜೆಪಿ ಯುವ ಮೋರ್ಚಾ ಸೇರಿ ವಿವಿಧ ಸಂಘಟನೆಗಳು ಬೆಳಗಾವಿಯಲ್ಲಿ ವಿಜಯೋತ್ಸವ ಆಚರಿಸಿದವು.
ಬೆಳಗಾವಿ ಜಿ.ಪಂ ಕಚೇರಿ ಮುಂದೆ ಮಾಜಿ ಸೈನಿಕರು ಕೈಯಲ್ಲಿ ಭಾರತದ ಬಾವುಟ ಹಿಡಿದು ಸಿಹಿ ಹಂಚಿ ಸಂಭ್ರಮಿಸಿದರೆ, ನಗರದ ಸಂಭಾಜಿ ಮಹಾರಾಜ ವೃತ್ತದಲ್ಲಿ ಬಿಜೆಪಿ ಯುವ ಮೋರ್ಚಾ ಪದಾಧಿಕಾರಿಗಳು ಪಟಾಕಿ ಸಿಡಿಸಿ, ಸಾರ್ವಜನಿಕರಿಗೆ ಸಿಹಿ ವಿತರಿಸಿದರು. ಈ ವೇಳೆ ತಾಯಿ ಭಾರತಾಂಬೆ, ಭಾರತೀಯ ಸೈನಿಕರಿಗೆ ಜೈಕಾರ ಕೂಗಿ ಅಭಿಮಾನ ಪ್ರದರ್ಶಿಸಿದರು.
ಇದೇ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಾಯಿರಾಮ ಜಹಗೀರದಾರ್, “ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ ನಾವು ಅಭಿನಂದನೆ ಸಲ್ಲಿಸುತ್ತೇವೆ. ಪ್ರತಿ ಬಾರಿ ಉಗ್ರರ ದಾಳಿ ಆದಾಗಲೂ ನಮ್ಮ ಭಾರತೀಯ ಸೇನೆ ಅವರಿಗೆ ತಕ್ಕ ಉತ್ತರ ಕೊಟ್ಟಿದೆ. ಇನ್ಮುಂದೆ ಭಾರತದ ಮೇಲೆ ದಾಳಿ ಮಾಡಲು ಪಾಕಿಸ್ತಾನ ನೂರು ಸಲ ವಿಚಾರ ಮಾಡುವಂತೆ ಪಾಠ ಕಲಿಸಿದ್ದಾರೆ” ಎಂದು ಹರ್ಷ ವ್ಯಕ್ತಡಿಸಿದರು.
“ಇಂದು ದೇಶಾದ್ಯಂತ ಮಾಕ್ ಡ್ರಿಲ್ ಮಾಡುತ್ತಾರೆ ಎಂದು ಹೇಳಲಾಗಿತ್ತು. ಆದರೆ, ಇಂದು ನಮ್ಮ ಭಾರತೀಯ ಸೇನೆ ಪಾಕ್ ಡ್ರಿಲ್ ಮಾಡಿದೆ. ನೂರಾರು ಉಗ್ರರನ್ನು ಸಂಹಾರ ಮಾಡಲಾಗಿದೆ. ಹಾಗಾಗಿ, ನಮ್ಮ ಸೈನಿಕರಿಗೆ, ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ನಾವು ಕೃತಜ್ಞತೆ ಸಲ್ಲಿಸುತ್ತೇವೆ” ಎನ್ನುತ್ತಾರೆ ಸ್ನೇಹಿತ ಶೆಟ್ಟಿ.



