ಮಂಗಳೂರು: ರಂಜಾನ್ ಮಾಸದಲ್ಲಿ ಉಪವಾಸ ಆಚರಿಸಿ ಈದ್ ಹಬ್ಬಕ್ಕೆ ಸಜ್ಜಾಗಿರುವ ಮುಸ್ಲಿಮರಿಗೆ ಅತ್ತರ್ನ ಪರಿಮಳ ಬೇಕೇ ಬೇಕು. ಪ್ರತಿಯೊಬ್ಬ ಮುಸ್ಲಿಮನೂ ಹಬ್ಬಕ್ಕೆ ಹೊಸ ಬಟ್ಟೆಗೆ ಹಚ್ಚಿಕೊಳ್ಳುವ ಅತ್ತರ್ ನಿಮಗೆ ಗೊತ್ತೇ?.
ಏನಿದು ಅತ್ತರ್?: ಈದ್ ಹಬ್ಬಕ್ಕೆ ಸಂಭ್ರಮದಲ್ಲಿರುವ ಮುಸ್ಲಿಮರು ಅತ್ತರ್ನ ಖರೀದಿಯಲ್ಲಿ ತೊಡಗಿದ್ದಾರೆ. ಅತ್ತರ್ ಎಂಬುದು ಸೆಂಟ್ ಅಥವಾ ಪರ್ಪ್ಯೂಮ್ನ ಮತ್ತೊಂದು ರೂಪ. ಸಾಧಾರಣವಾಗಿ ಸೆಂಟ್ನಲ್ಲಿ ಅಲ್ಕೋಹಾಲ್, ರಾಸಾಯನಿಕ ಮಿಶ್ರಿತವಾಗಿರುತ್ತದೆ. ಆದರೆ ಅತ್ತರ್ ಸುವಾಸಿತ ದ್ರವ್ಯವಾಗಿದ್ದರೂ ಇದಕ್ಕೆ ಅಲ್ಕೋಹಾಲ್, ರಾಸಾಯನಿಕ ಬಳಕೆಯಾಗುವುದಿಲ್ಲ. ಇದನ್ನು ದೇಹ ಅಥವಾ ಬಟ್ಟೆಗಳಿಗೆ ಹಚ್ಚಿಕೊಂಡರೆ ಸುವಾಸನೆ ಇರುತ್ತದೆ.
ಈದ್ ಹಬ್ಬಕ್ಕೆ ಬೇಕು ಅತ್ತರ್: ಒಂದು ತಿಂಗಳು ಉಪವಾಸ ಮಾಡುವ ಮುಸ್ಲಿಮರು ಈದ್ ಉಲ್ ಫಿತ್ರ್ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ. ಈ ಹಬ್ಬಕ್ಕೆ ಪ್ರತಿಯೊಬ್ಬ ಮುಸ್ಲಿಮರೂ ಅತ್ತರ್ ಹಚ್ಚುತ್ತಾರೆ. ಹೊಸ ಬಟ್ಟೆಗಳನ್ನು ಉಟ್ಟು ಅತ್ತರ್ ಹಚ್ಚಿ, ಮಸೀದಿಗೆ ತೆರಳಿ ನಮಾಜ್ ಸಲ್ಲಿಸಿ ಹಬ್ಬ ಆಚರಿಸಲಾಗುತ್ತದೆ. ಉಪವಾಸದ ಸಂದರ್ಭದಲ್ಲಿ ಅತ್ತರ್ ದೇಹಕ್ಕೆ ಅಥವಾ ಬಟ್ಟೆಗೆ ಹಚ್ಚುವಂತಿಲ್ಲ. ಒಂದು ತಿಂಗಳ ಉಪವಾಸ ಮುಗಿದು ಆಚರಿಸುವ ಈದ್ ಹಬ್ಬಕ್ಕೆ ಅತ್ತರ್ ಅನ್ನು ಎಲ್ಲರೂ ಬಳಸುತ್ತಾರೆ.
ಮಾರುಕಟ್ಟೆಯಲ್ಲಿ 200ಕ್ಕೂ ಅಧಿಕ ಬಗೆಯ ಅತ್ತರ್ ಇದೆ. ಮಂಗಳೂರಿನ ಅಸ್ಗರ್ ಅಲಿ ಅತ್ತರ್ ವಾಲ ಅಂಗಡಿಯಲ್ಲಿ 200 ಬಗೆಯ ಅತ್ತರ್ ಸುಗಂಧ ದ್ಯವ್ಯ ಇದೆ. ಖರೀದಿಗೆ ಬರುವವರು ತಮ್ಮ ಮನೆಗೆ ಅಗತ್ಯಕ್ಕೆ ತಕ್ಕಂತೆ ಅತ್ತರ್ ಖರೀದಿಸುತ್ತಾರೆ.
ಅಂಗಡಿ ಮಾಲೀಕರಲ್ಲೊಬ್ಬರಾದ ಅಬ್ಬಾಸ್, “ಅತ್ತರ್ನಲ್ಲಿ ಆಲ್ಕೋಹಾಲ್ ಇರುವುದಿಲ್ಲ. ಸೆಂಟ್ನಲ್ಲಿ ಸ್ಪಿರಿಟ್, ಆಲ್ಕೋಹಾಲ್ ಇರುವುದರಿಂದ ಅದು ಆಗುವುದಿಲ್ಲ. ಅತ್ತರ್ ಎಂಬುದು ಪವಿತ್ರ. ಅದನ್ನು ನಮಾಜ್ಗೆ ಹೋಗುವಾಗ ಹಚ್ಚುತ್ತಾರೆ. ಅತ್ತರ್ನಲ್ಲಿ ಸುಮಾರು 300 ಬಗೆಯ ಅತ್ತರ್ ಇದೆ. ಅರೇಬಿಕ್, ಇಂಡಿಯನ್, ಫ್ರೆಂಚ್ನ ಅತ್ತರ್ಗಳು ಸಿಗುತ್ತದೆ. ಅಸ್ಸಾಂ, ಮುಂಬಯಿನಿಂದ ಇದು ಬರುತ್ತದೆ. ನಮ್ಮ ತಾತನ ಕಾಲದಿಂದ 90 ವರ್ಷದಿಂದ ಇದರ ವ್ಯಾಪಾರ ಮಾಡುತ್ತಿದ್ದೇವೆ” ಎಂದರು.