ಸಿರುಗುಪ್ಪ : ನಗರದ ಶ್ರೀ ಯಲ್ಲಮ್ಮದೇವಿ ಪ್ರಾಥಮಿಕ ಮತ್ತು ಪ್ರೌಡಶಾಲೆಯ ಆವರಣದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್ ವತಿಯಿಂದ ನಡೆದ ಬೀದಿನಾಟಕದ ಜಾಗೃತಿ ಕಾರ್ಯಕ್ರಮವನ್ನು ನಗರಸಭೆ ಸದಸ್ಯೆ ವೈ.ಡಿ. ಲಕ್ಷ್ಮೀದೇವಿ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು.
ತಾಲೂಕು ಯೋಜನಾಧಿಕಾರಿ ಸುಧೀರ್ ಅಂಗಳೂರು ಅವರು ಮಾತನಾಡಿ ತಾಲೂಕಿನಲ್ಲಿ 25 ಜ್ಞಾನವಿಕಾಸ ಕೇಂದ್ರಗಳಿವೆ. ಮಹಿಳೆಯರಿಗೆ ಪ್ರತಿ ತಿಂಗಳು ಯೋಜನೆ ವತಿಯಿಂದ ಪ್ರತಿಯೊಂದು ವಿಷಯದ ಜಾಗೃತಿಯಾಗಬೇಕೆಂಬುದು ಶ್ರೀ ಧರ್ಮಸ್ಥಳ ಧರ್ಮಾಧಿಕಾರಿ ಪರಮಪೂಜ್ಯ ವೀರೇಂದ್ರ ಹೆಗಡೆ ಹಾಗೂ ಅವರ ಧರ್ಮಪತ್ನಿಯಾಗಿರುವ ಶ್ರೀಮತಿ ಡಾ.ಹೇಮಾವತಿ ಅಮ್ಮನವರ ಆಶಯವಾಗಿದೆ.
ಅದರಂತೆ ಈ ಕಾರ್ಯಕ್ರಮದಲ್ಲಿ ದಾರವಾಡದ ಸಿ.ವೈ.ಸಿ.ಡಿ ಕಲಾತಂಡದವರು ನೀರಿನ ಮಿತ ಬಳಕೆ, ಸ್ವಚ್ಛತೆ, ಶಿಕ್ಷಣದ ಬಗ್ಗೆ ಬೀದಿ ನಾಟಕದ ಮೂಲಕ ನಿಮ್ಮೆಲ್ಲರಿಗೆ ಮಾಹಿತಿಯನ್ನು ನೀಡಲಿದ್ದು, ಇಂತಹ ಉತ್ತಮ ಅಂಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು.
ಬೀದಿ ನಾಟಕದ ಪ್ರದರ್ಶನದಲ್ಲಿ ನೀರು ಉಳಿಸುವುದು, ಮನೆಯ ಸುತ್ತಮುತ್ತಲಿನ ಪರಿಸರ ಸ್ವಚ್ಚವಾಗಿಡುವುದು, ಸಂಘಟನೆಯ ಮಹತ್ವ, ನೆರೆ ಹೊರೆಯವರೊಂದಿಗೆ ಉತ್ತಮ ಭಾಂದವ್ಯದೊಂದಿಗೆ ಜೀವಿಸುವುದು, ಧಾರ್ಮಿಕ ಕಾರ್ಯಕ್ರಮಗಳು, ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ದೊರೆಯುವ ನೆಮ್ಮದಿಯ ಬಗ್ಗೆ ವಿವರಿಸಲಾಯಿತು.
ಇದೇ ವೇಳೆ ಶಾಲಾ ಮುಖ್ಯೋಪಾದ್ಯಾಯಿನಿ ವೈ.ಡಿ.ನಂದಿನಿ, ಯೋಜನೆಯ ಕೃಷಿ ಅಧಿಕಾರಿ ಪ್ರಭುಹಿರೇಮಠ್, ಮಹಿಳಾ ಒಕ್ಕೂಟದ ಮುಖ್ಯಸ್ಥೆ ಸ್ವರೋಜಮ್ಮ, ಮೇಲ್ವಿಚಾರಕರಾದ ರೂಪಾ, ಚಂದ್ರಕಲಾ ಹಾಗೂ ಇನ್ನಿತರ ಪದಾಧಿಕಾರಿಗಳು, ಸೇವಾ ಪ್ರತಿನಿಧಿಗಳು, ಕಲಾ ತಂಡದವರು ಇದ್ದರು.
ವರದಿ : ಶ್ರೀನಿವಾಸ ನಾಯ್ಕ