ಬೆಂಗಳೂರು : ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಮಧ್ಯದ ಕುರ್ಚಿ ಕಿಚ್ಚಿಗೆ ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯ ತುಪ್ಪ ಸುರಿದಿದ್ದಾರೆ. ಪೂರ್ಣಾವಧಿಗೆ ಸಿದ್ದರಾಮಯ್ಯ ಸಿಎಂ ಎಂದಿದ್ದಾರೆ. ಇದು ಡಿಸಿಎಂ ಡಿಕೆ ಶಿವಕುಮಾರ್ ಬೇಸರಕ್ಕೆ ಕಾರಣವಾದಂತೆ ಕಾಣ್ತಿದೆ.
‘ಆಯ್ತಪ್ಪಾ.. ಯತೀಂದ್ರರೇ ಈಗ ನಮ್ಮ ಹೈಕಮಾಂಡ್. ಅವರು ಹೇಳಿದ ಮೇಲೆ ಅವರ ಮಾತನ್ನೇ ಗೌರವದಿಂದ ಸ್ವೀಕರಿಸೋಣ ನಡೀರಿ. ಈ ಬಗ್ಗೆ ನನಗೆ ಪ್ರತಿಕ್ರಿಯಿಸಲು ಇಷ್ಟವಿಲ್ಲ. ದೆಹಲಿಯವರು ಪ್ರತಿಕ್ರಿಯೆ ನೀಡಬೇಕು’ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಟಾಂಗ್ ನೀಡಿದ್ದಾರೆ.
5 ಐದು ವರ್ಷವೂ ಸಿದ್ದರಾಮಯ್ಯನವರೇ ಸಿಎಂ ಆಗಿರುತ್ತಾರೆ, ನಾಯಕತ್ವ ಬದಲಾವಣೆ ಮಾಡಲ್ಲ ಎಂದು ಹೈಕಮಾಂಡ್ ಸಿಗ್ನಲ್ ಕೊಟ್ಟಿದೆ ಎಂಬ ಯತೀಂದ್ರ ಸಿದ್ದರಾಮಯ್ಯನವರ ಹೇಳಿಕೆ ಬಗ್ಗೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಮಾತನಾಡಿದರು.
ಯತೀಂದ್ರ ಸಿದ್ದರಾಮಯ್ಯ ಹೇಳಿಕೆಯಿಂದ ರಾಜ್ಯ ರಾಜಕೀಯದಲ್ಲಿ ಮತ್ತೆ ನಾಯಕತ್ವ ಬದಲಾವಣೆ ವಿಚಾರದ ಚರ್ಚೆ ಶುರುವಾಗಿದೆ. ಕಾಂಗ್ರೆಸ್ ಹೈಕಮಾಂಡ್ ನೇರವಾಗಿ ಹೇಳದೆ ಇರಬಹುದು ಆದ್ರೆ ಸಿಗ್ನಲ್ ಕೊಟ್ಟಿದೆ ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿದ್ದರು, ಈ ಹೇಳಿಕೆ ಸಂಚಲನಕ್ಕೆ ಕಾರಣವಾಗಿದೆ.
ಈ ಬೆನ್ನಲ್ಲೇ ಡಿಸಿಎಂ ಡಿಕೆ ಶಿವಕುಮಾರ್ ಅವರು ಯತೀಂದ್ರ ಸಿದ್ದರಾಮಯ್ಯ ಹೇಳಿಕೆಗೆ ರಿಯಾಕ್ಟ್ ಮಾಡಿದ್ದಾರೆ. ಯತೀಂದ್ರ ಅವರೇ ನಮ್ಮ ಹೈಕಮಾಂಡ್, ಅವರು ಏನ್ ಮಾತು ಹೇಳ್ತಾರೋ ಅದನ್ನ ಗೌರವದಿಂದ ಸ್ವೀಕಾರ ಮಾಡೋಣ ಎಂದು ಡಿಸಿಎಂ ಡಿಕೆಶಿ ಟಾಂಗ್ ಕೊಟ್ಟಿದ್ದಾರೆ.




