ತಿರುವನಂತಪುರಂ: ಗೂಗಲ್ ಮ್ಯಾಪ್ ನೋಡಿ ಪ್ರಯಾಣ ಬೆಳೆಸುವಾಗ ಅವಘಡಗಳು ಸಂಭವಿಸಿದ ಘಟನೆಗಳು ಇತ್ತೀಚೆಗೆ ನಡೆಯುತ್ತಿವೆ.
ಅಯ್ಯಪ್ಪ ಭಕ್ತರೊಬ್ಬರು ಗೂಗಲ್ ಮ್ಯಾಪ್ ಸಹಾಯದಿಂದ ಮಂಗಳೂರು ತಲುಪಲು ಮುಂದಾಗಿ ಬರೋಬ್ಬರಿ 7 ಗಂಟೆಗಳ ಕಾಲ ಕೆಸರಿನಲ್ಲಿ ಸಿಲುಕಿಕೊಂಡ ಪ್ರಸಂಗವೊಂದು ನಡೆದಿರುವುದು ಬೆಳಕಿಗೆ ಬಂದಿದೆ.
ಘಟನೆಯ ವಿಚಾರ ತಿಳಿಯುತ್ತಿದ್ದಂತೆಯೇ ಪೊಲೀಸರು ಬಂದ ಮಂಗಳೂರು ಮೂಲದ ಪರಶುರಾಮರನ್ನು ಭಾರೀ ಅಪಾಯದಿಂದ ಪಾರು ಮಾಡಿದ್ದಾರೆ.
ವಿಕಲ ಚೇತನರಾಗಿರುವ ಪರಶುರಾಮ ಅವರು ಅಯ್ಯಪ್ಪನ ದರ್ಶನ ಪಡೆಯಲು ಶಬರಿ ಮಲೆಗೆ ತೆರಳಿದ್ದರು. ವಿಕಲಚೇತನರಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಿದ್ದ ದ್ವಿಚಕ್ರ ವಾಹನದಲ್ಲಿ ಅವರು ಮಂಗಳೂರಿನಿಂದ ಶಬರಿಮಲೆಗೆ ತೆರಳಿ ಅಲ್ಲಿ ಅಯ್ಯಪ್ಪನ ದರ್ಶನ ಮುಗಿಸಿ ಭಾನುವಾರ ಮರಳುತ್ತಿದ್ದರು. ಹೀಗೆ ವಾಪಸ್ಸಾಗುತ್ತಿದ್ದ ಪರಶುರಾಮ, ಬೇಗನೇ ಮನೆ ತಲುಪಬೇಕು ಎಂದು ಅವರು ಗೂಗಲ್ ಮ್ಯಾಪ್ ಮೊರೆ ಹೋಗಿದ್ದಾರೆ.
ಈ ವೇಳೆ ಗೂಗಲ್ ಮ್ಯಾಪ್ ಅಡ್ಡ ದಾರಿಯೊಂದನ್ನು ತೋರಿಸಿದೆ. ಭಾನುವಾರ ಸಂಜೆ 7ಕ್ಕೆ ದಿಂಡಿಗಲ್ ಜಿಲ್ಲೆಯ ವಟ್ಟಲಕುಂದು ಪಕ್ಕದ ಎಂ.ವಾಡಿಪ್ಪತಿ ಪ್ರದೇಶ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಸಾಗಬೇಕಿದ್ದ ಅವರ ಮಾರ್ಗ ತಪ್ಪಿ, ಸಮುದ್ರ ಕಣ್ಮಾಯಿಗೆ ತೆರಳುವ ರಸ್ತೆಗೆ ಹೋಗಿದ್ದಾರೆ.
ಅಲ್ಲಿ ಸೇತುವೆ ದಾಟಿದ ಬಳಿಕ ಅನಿರೀಕ್ಷಿತವಾಗಿ ಕಣ್ಮಾಯಿ ಪ್ರದೇಶದಲ್ಲಿ ಕೆಸರಿನಲ್ಲಿ ಸಿಲುಕಿಕೊಂಡಿದ್ದಾರೆ. ಈ ವೇಳೆ ಮಳೆ ಅಬ್ಬರ ಕೂಡ ಹೆಚ್ಚಾಗಿದ್ದರಿಂದ ಅಲ್ಲಿಯೇ 7 ಗಂಟೆ ಸಿಲುಕಿದ್ದಾರೆ.
ಈ ಸಂದರ್ಭದಲ್ಲಿ ಸುತ್ತಮುತ್ತ ಯಾರೂ ಇಲ್ಲದ ಕಾರಣ ಅವರ ಸಹಾಯಕ್ಕೆ ಕೂಡ ಯಾರು ನೆರವಾಗಲಿಲ್ಲ. 7 ಗಂಟೆಯ ನರಳಾಟದ ನಂತರ ದಿಕ್ಕು ತೋಚದೇ ಕರ್ನಾಟಕದ ಪೊಲೀಸರಿಗೆ ಕರೆ ಮಾಡಿ ಅವರ ಸಹಾಯದಿಂದ ಸಂಬಂಧಿಕರಿಗೂ ವಿಷಯ ಮುಟ್ಟಿಸಿದ್ದಾರೆ. ಕೂಡಲೇ ಕರ್ನಾಟಕ ಪೊಲೀಸರು ದಿಂಡಿಗಲ್ ಪೊಲೀಸ್ ಕಂಟ್ರೋಲ್ ರೂಮ್ಗೆ ವಿಷಯ ಮುಟ್ಟಿಸಿದ್ದಾರೆ.
ದಿಂಡಿಗಲ್ ಪೊಲೀಸರು ಸಹಾಯಕ್ಕೆ ಆಗಮಿಸಿ ದಿಂಡಿಗಲ್ ಜಿಲ್ಲೆಯ ವಟ್ಟಲಕುಂದು ಬಳಿಯಿರುವ ಎಂ.ವಾಡಿಪ್ಪಟಿ ಸಮುದ್ರಂ ಕಣ್ಮಾಯಿ ಪ್ರದೇಶಕ್ಕೆ ತೆರಳಿ ಪರಶುರಾಮ ಅವರನ್ನು ರಕ್ಷಣೆ ಮಾಡಿದ್ದಾರೆ.
ತಮಿಳುನಾಡು ಪೊಲೀಸರ ಈ ಸಹಾಯಕ್ಕೆ ಕರ್ನಾಟಕ ಪೊಲೀಸರು ಮೆಚ್ಚುಗೆ ವ್ಯಕ್ತಪಡಿಸಿ, ಧನ್ಯವಾದಗಳನ್ನು ತಿಳಿಸಿದ್ದಾರೆ.