ತುರುವೇಕೆರೆ: ಪಟ್ಟಣದ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ ವತಿಯಿಂದ ಶ್ರೀ ಅಯ್ಯಪ್ಪಸ್ವಾಮಿಯವರ ಮಂಡಲ ಪೂಜೆ ಹಾಗೂ ಜ್ಯೋತಿ ಮಹೋತ್ಸವದ ಅಂಗವಾಗಿ ಏರ್ಪಡಿಸಿದ್ದ ಅನ್ನದಾನ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು.
ಡಿಸೆಂಬರ್ 12 ರಿಂದ ಪ್ರತಿನಿತ್ಯ ಶ್ರೀ ಅಯ್ಯಪ್ಪಸ್ವಾಮಿಯವರಿಗೆ ವಿಶೇಷ ಜೇನುತುಪ್ಪದ ಅಭಿಷೇಕ, ಪಂಚಾಮೃತ ಅಭಿಷೇಕ, ಪೂಜಾ ಕೈಂಕರ್ಯ, ಮಹಾಮಂಗಳಾರತಿ ನಡೆಯುತ್ತಾ ಬಂದಿದೆ. ಡಿಸೆಂಬರ್ 28 ರಂದು ಶನಿವಾರ ಸಂಜೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮಂಗಳವಾದ್ಯ, ಆರತಿ ದೀಪವನ್ನು ಹೊತ್ತ ಪುಟ್ಟ ಬಾಲೆಯರು ಹಾಗೂ ಅಯ್ಯಪ್ಪ ಮಾಲಾಧಾರಿಗಳೊಂದಿಗೆ ಪುಷ್ಪ ಮಂಟಪದಲ್ಲಿ ಧರ್ಮಶಾಸ್ತ್ರ ಶ್ರೀ ಅಯ್ಯಪ್ಪಸ್ವಾಮಿಯವರ ಅದ್ದೂರಿ ಮೆರವಣಿಗೆ ನೆರವೇರಿತು.
ಹೊಸ ವರ್ಷವಾದ ಜನವರಿ 01 ರಂದು ಸ್ವಾಮಿಯ ಪ್ರಸಾದಕ್ಕೆ ಅರ್ಚಕರಾದ ಮಂಜುನಾಥಶಾಸ್ತ್ರಿಗಳು ಗುರುಸ್ವಾಮಿ ರಾಮಚಂದ್ರಸ್ವಾಮಿಗಳು ಮಂಗಳಾರತಿ ನೆರವೇರಿಸಿ ಅನ್ನದಾನಕ್ಕೆ ಚಾಲನೆ ನೀಡಿದರು. ಅಯ್ಯಪ್ಪಸ್ವಾಮಿ ಸೇವಾ ಸಮಿತಿಯು ಸಾರ್ವಜನಿಕರಿಂದ ಸಾರ್ವಜನಿಕರಿಗಾಗಿ ಏರ್ಪಡಿಸಿದ್ದ ಅನ್ನದಾನ ಕಾರ್ಯಕ್ರಮದಲ್ಲಿ ಮೂರು ಸಾವಿರಕ್ಕೂ ಅಧಿಕ ಮಂದಿ ಭಕ್ತರು, ನಾಗರೀಕರು ಸ್ವಾಮಿಯ ಪ್ರಸಾದ ಸ್ವೀಕರಿಸಿ ಕೃತಾರ್ಥರಾದರು. ಜನವರಿ 02 ರಂದು ಸ್ವಾಮಿಯವರಿಗೆ ವಿಶೇಷ ಅಷ್ಟದ್ರವ್ಯಾಭಿಷೇಕವನ್ನು ಏರ್ಪಡಿಸಿದ್ದು, ಜನವರಿ 08 ರಂದು ಮಹಾಮಂಗಳಾರತಿ ನೆರವೇರಿಸಲಾಗುತ್ತದೆ. ಜನವರಿ 09 ರಂದು ಅಯ್ಯಪ್ಪ ಮಾಲಾಧಾರಿಗಳಿಗೆ ಗುರುಸ್ವಾಮಿ ರಾಮಚಂದ್ರಸ್ವಾಮಿ, ಶ್ರೀಧರಸ್ವಾಮಿ, ಮುನಿಯಪ್ಪ ಸ್ವಾಮಿ, ಮಂಜುನಾಥಸ್ವಾಮಿ, ಕೃಷ್ಣರಾಜ ಅರಸ್ ಸ್ವಾಮಿಗಳು
ಇರುಮುಡಿ ಸೇವೆ ನಡೆಸಲಿದ್ದು, ಜನವರಿ 10 ರಂದು ಮಾಲಾಧಾರಿಗಳು ಶಬರಿಮಲೆಗೆ ಯಾತ್ರೆ ಕೈಗೊಳ್ಳಲಿದ್ದಾರೆ. ಜನವರಿ 14 ರಂದು ಮಂಗಳವಾರ ಸಂಜೆ 6.40 ಕ್ಕೆ ಮಕರ ಜ್ಯೋತಿ ಪೂಜೆಯನ್ನು ಸನ್ನಿಧಾನದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಸಂದರ್ಭದಲ್ಲಿ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿಯ ಅಧ್ಯಕ್ಷ ಹೆಚ್.ಆರ್. ರಾಮೇಗೌಡರು, ಗೌರವಾಧ್ಯಕ್ಷ ಶ್ರೀನಾಥ್ ಗುಪ್ತ, ಕಾರ್ಯದರ್ಶಿ ಮಲ್ಲಿಕಾರ್ಜುನ್, ಖಜಾಂಚಿ ವಿಕಾಸ್, ಸಮಿತಿಯ ಪದಾಧಿಕಾರಿಗಳಾದ ಟಿ.ಎನ್.ಸತೀಶ್, ಲಂಕೇಶ್, ನವೀನ್ (ಪಿಂಟು) ನಾಗರಾಜ್, ಪಟ್ಟಣ ಪಂಚಾಯ್ತಿ ಸದಸ್ಯರಾದ ಎನ್.ಆರ್.ಸುರೇಶ್, ಚಿದಾನಂದ್, ವರ್ತಕರ ಸಂಘದ ನರಸಿಂಹಮೂರ್ತಿ, ರೇಣುಕ ಸೇರಿದಂತೆ ಸಮಿತಿಯ ನಿರ್ದೇಶಕರು, ಮಾಲಾಧಾರಿಗಳು, ಭಕ್ತರು, ನಾಗರೀಕರು ಉಪಸ್ಥಿತರಿದ್ದರು.
ವರದಿ: ಗಿರೀಶ್ ಕೆ ಭಟ್