ಕಲಬುರಗಿ : ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಡೆಯಲಿರುವ ಚುನಾವಣೆಗೆ ಅಭ್ಯರ್ಥಿ ಹಾಕುತ್ತೇವೆ. ಹೈಕಮಾಂಡ್ ಜಾತಿ ಲೆಕ್ಕಾಚಾರ ನೋಡಿ ಅಭ್ಯರ್ಥಿ ಆಯ್ಕೆ ಮಾಡಿದರೆ, ವಾಲ್ಮೀಕಿ ಸಮುದಾಯದಿಂದ ಬಿ.ಶ್ರೀರಾಮುಲು ಅವರು ರಾಜ್ಯಾಧ್ಯಕ್ಷರಾದರೆ ನಮ್ಮದೇನೂ ತಕರಾರಿಲ್ಲ ಎಂದು ರೆಬಲ್ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದರು.
ದೆಹಲಿಗೆ ತೆರಳುವ ಮುನ್ನ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಲಿಂಗಾಯತ ಕೋಟಾದಡಿ ಅಭ್ಯರ್ಥಿ ಬಂದರೆ ಸ್ಪರ್ಧೆಗೆ ನಾನು ಸಿದ್ಧನಾಗಿದ್ದೇನೆ. ಯತ್ನಾಳ್ ರಾಜ್ಯಾಧ್ಯಕ್ಷ ಆಗಬೇಕು ಎಂಬುವವರು ಹಲವರು ಇದ್ದಾರೆ.
ಯತ್ನಾಳ್ ಕೆಲಸ ಮಾಡುತ್ತಾನೆ. ದುಡ್ಡು ಹೊಡೆಯಲ್ಲ ಎಂದು ಹೇಳುತ್ತಾರೆ. ನನ್ನ ಬಗ್ಗೆ ಒಳ್ಳೆಯ ಅಭಿಪ್ರಾಯಗಳು ಕಾರ್ಯಕರ್ತರಲ್ಲಿದೆ. ನಾನೂ ಯಡಿಯೂರಪ್ಪ ಅವರ ಸಮಕಾಲೀನವನು. ಇವತ್ತಿನವನಲ್ಲ ಎಂದರು.
ಚುನಾವಣೆ ಬಳಿಕವೂ ನಾನೇ ರಾಜ್ಯದ ಅಧ್ಯಕ್ಷ ಎಂದಿದ್ದ ವಿಜಯೇಂದ್ರ ಅವರ ಮಾತಿಗೂ ಟಕ್ಕರ್ ನೀಡಿರುವ ಯತ್ನಾಳ್, ಮೊದಲು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಚುನಾವಣೆಯಾಗಲಿ. ಅಲ್ಲಿಯವರೆಗೆ ವಿಜಯೇಂದ್ರ ಕೈ ಮುಗಿದುಕೊಂಡು ಓಡಾಡಿ ಬೆಂಬಲ ಕೇಳಲಿ. ಒಂದು ವೇಳೆ ವಿಜಯೇಂದ್ರ ಮುದುವರಿದರೆ ನಮ್ಮ ಹೋರಾಟ ಮುಂದುವರಿಸುವ ನಿರ್ಣಯ ತಿಳಿಸುತ್ತೇವೆ ಎಂದೂ ಎಚ್ಚರಿಕೆ ನೀಡಿದರು.
ಇನ್ನು ಯಾರೂ ತಲೆ ಕೆಡಿಸಿಕೊಳ್ಳಬೇಡಿ ಎಲ್ಲಾ ಒಳ್ಳೆಯದಾಗುತ್ತದೆ. ವಿಜಯೇಂದ್ರ ಹೋದರೆ ಪಕ್ಷಕ್ಕೆ ಎಲ್ಲವೂ ಒಳ್ಳೆಯದಾಗಲಿದೆ. ವಿಜಯೇಂದ್ರ ಹೋಗಿ ನಾಲ್ಕೈದು ದಿನಗಳಲ್ಲೇ ಪಕ್ಷಕ್ಕೆ ಒಳ್ಳೆಯ ಸಮಯ ಬರಲಿದೆ ಎಂದು ಯತ್ನಾಲ್ ಭವಿಷ್ಯ ನುಡಿದರು.




