ತುರುವೇಕೆರೆ: ಅಕ್ಷರ ಮತ್ತು ಜ್ಞಾನವನ್ನೂ ಕಲಬೆರೆಕೆ ಮಾಡುವ ಘೋರ ಪಾಪ ಮಾಡಿರುವ ನಮ್ಮನ್ನು ಮುಂದಿನ ಪೀಳಿಗೆ ಖಂಡಿತಾ ಕ್ಷಮಿಸುವುದಿಲ್ಲ ಎಂದು ಖ್ಯಾತ ರಂಗಕರ್ಮಿ ಬಾಬು ಹಿರಣ್ಣಯ್ಯ ನುಡಿದರು.
ಪಟ್ಟಣದ ಸತ್ಯಗಣಪತಿ ಆಸ್ಥಾನ ಮಂಟಪದಲ್ಲಿ ನಡೆದ ೬ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸುವ್ವಿಮಲ್ಲ ವೇದಿಕೆಯಲ್ಲಿ ಸಮಾರೋಪ ಭಾಷಣ ಮಾಡಿದ ಅವರು, ಇತಿಹಾಸವನ್ನು ಸೃಷ್ಟಿ ಮಾಡುವ, ಜನರನ್ನು ಜಾಗೃತಿಗೊಳಿಸಿ ಹೊಸ ಕ್ರಾಂತಿಗೆ ಮುನ್ನುಡಿ ಹಾಡುವ ಚೈತನ್ಯ ಅಕ್ಷರಗಳಿಗೆ ಇದೆ. ಮಾನವೀಯ ಮೌಲ್ಯಗಳ ಮೂಲಕ ಕಟ್ಟಿ ಕೊಟ್ಟ ಅಕ್ಷರ ತಲೆತಲಾಂತರಕ್ಕೂ ಸಂಸ್ಕೃತಿಯ ಭಾಗವಾಗಿ ಹೃದಯದಲ್ಲಿ ನೆಲೆಯೂರುತ್ತದೆ. ಕುವೆಂಪು, ಮಾಸ್ತಿ, ಬೇಂದ್ರೆ, ಕಾರಂತ, ಕಾರ್ನಾಡರಂತಹ ಮಹನೀಯರ ಪರಂಪರೆ ನಮ್ಮ ಪೀಳಿಗೆಗೆ ಮೌಲ್ಯಯುತ ಸಾಹಿತ್ಯವನ್ನು ಬಿಟ್ಟು ಹೋಗಿತ್ತು. ಆದರೆ ಇಂದು ಅಕ್ಷರ ಮತ್ತು ಜ್ಞಾನ ಸುಳ್ಳು ಹಾಗೂ ಚರ್ವಿತ ಚರ್ವಣ ಕಥನಗಳ ಸೃಷ್ಟಿಗಾಗಿ ಉಪಯೋಗವಾಗುತ್ತಿದೆ. ಅಕ್ಷರಗಳು ವಿಕೃತಿಯ ಅಭಿವ್ಯಕ್ತಿ ಮತ್ತು ಅಗ್ಗದ ಮನರಂಜನೆಯ ಮಾಧ್ಯಮವಾಗಿ ವಿಜೃಂಬಿಸುತ್ತಿರುವುದು ಈ ಕಾಲದ ದುರಂತ ಎಂದರು.

ಪ್ರಸ್ತುತ ನಾಡಿನಲ್ಲಿ ಸಾವಿರ ಸಾವಿರ ಪುಸ್ತಕಗಳು ಮಾರಾಟವಾಗುತ್ತಿದೆ ಎಂದು ಖುಷಿಪಡಬೇಕಾ ಅಥವಾ ಜನರನ್ನೇ ಮುಟ್ಟದ ಇವುಗಳ ಮಧ್ಯೆ ಲಕ್ಷ ಲಕ್ಷ ಸುಳ್ಳುಗಳು, ವಿಕೃತಗಳು ಬಿಕರಿಯಾಗುತ್ತಿವೆ ಎಂದು ವಿಷಾಧಿಸಬೇಕಾ ಎಂಬ ತ್ರಿಶಂಕು ಸ್ಥಿತಿಯಲ್ಲಿ ನಿಂತಿದ್ದೇವೆ ಎಂದು ವಿಷಾಧಿಸಿದ ಅವರು, ಕನ್ನಡಿಗರೆಂದು ಹೆಮ್ಮೆಯಿಂದ ಹೇಳಿಕೊಳ್ಳುವ ನಾವುಗಳು ಕನ್ನಡ ನಾಡು, ನುಡಿ, ಸಂಸ್ಕೃತಿ, ಸಾಹಿತ್ಯವನ್ನು ಉಳಿಸಿ ಬೆಳೆಸಿ ಕಾಪಾಡಿಕೊಳ್ಳಬೇಕಾದ ಜವಾಬ್ದಾರಿಯನ್ನು ಹೊರಬೇಕಿದೆ. ಸಮೃದ್ಧವಾದ ಕನ್ನಡ ಭಾಷೆಗೆ ಸಹಸ್ರಾರು ವರ್ಷಗಳ ಇತಿಹಾಸವಿದೆ. ಅಕ್ಷರ ಸಂಸ್ಕೃತಿಯನ್ನು ಬೆಳೆಸುವಲ್ಲಿ ನೂರಾರು ಮಹನೀಯರ ಕೊಡುಗೆ ಇದೆ. ಇವೆಲ್ಲವೂ ನಮ್ಮ ಮೂಲ ಬೇರು. ಈ ಸಂಸ್ಕೃತಿಯ ಬೇರು ಹಾಳಾಗದಂತೆ ನೋಡಿಕೊಳ್ಳುವ ಹೊಣೆಗಾರಿಗೆ ನಮ್ಮದಾಗಿದೆ. ಈ ನಿಟ್ಟಿನಲ್ಲಿ ಕನ್ನಡ ನಾಡು, ಭಾಷೆ, ಸಂಸ್ಕೃತಿಯ ಉಳಿಸಿ ಬೆಳೆಸುವ ಕಾರ್ಯಕ್ಕೆ ನಾವೆಲ್ಲರೂ ಕಂಕಣಬದ್ಧರಾಗಿ ದುಡಿಯಬೇಕಿದೆ ಎಂದರು.
ಸಮ್ಮೇಳನದ ಸರ್ವಾಧ್ಯಕ್ಷರಾದ ಸಂಪಿಗೆ ತೋಂಟದಾರ್ಯ ಮಾತನಾಡಿ, ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಿದ ಜಿಲ್ಲಾ ಮತ್ತು ತಾಲ್ಲೂಕು ಘಟಕದ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಸಾಹಿತ್ಯಾಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದರು.
ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಡಿ.ಪಿ. ರಾಜು ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ತಾಲೂಕು ಕಸಾಪ ವತಿಯಿಂದ ಖ್ಯಾತ ರಂಗಕರ್ಮಿ ಬಾಬು ಹಿರಣ್ಣಯ್ಯ ಅವರನ್ನು ಗೌರವಿಸಲಾಯಿತು. ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು. ಎಸ್.ಎಸ್.ಎಲ್.ಸಿ ಮತ್ತು ಪಿಯುಸಿಯಲ್ಲಿ ಕನ್ನಡ ಭಾಷೆಯಲ್ಲಿ ನೂರಕ್ಕೆ ನೂರು ಅಂಕ ಪಡೆದ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಗೌರವಾಧ್ಯಕ್ಷ ಬೋರೇಗೌಡ, ಕಾರ್ಯದರ್ಶಿ ದಿನೇಶ್ ಕುಮಾರ್, ಸಿ.ಪಿ.ಪ್ರಕಾಶ್, ಪ್ರೊ. ಗಂಗಾಧರ ದೇವರಮನೆ, ವಿಜಯಕುಮಾರ್, ಮುನಿರಾಜು ಇತರರು ಉಪಸ್ಥಿತರಿದ್ದರು.
ವರದಿ: ಗಿರೀಶ್ ಕೆ ಭಟ್




