ಹುಬ್ಬಳ್ಳಿ: –ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ನಿರೀಕ್ಷೆಯಂತೆಯೇ ಇಪ್ಪತ್ಮೂರನೇ ಪ್ರಥಮ ಪ್ರಜೆಯಾಗಿ ರಾಮಣ್ಣ ಬಡಿಗೇರ ಹಾಗೂ ಉಪ ಮೇಯರ್ ಆಗಿ ಪೂರ್ವ ಕ್ಷೇತ್ರದ ದುರ್ಗಮ್ಮ ಶಶಿಕಾಂತ ಬಿಜವಾಡ ಆಯ್ಕೆಯಾದರು.
ಇಲ್ಲಿನ ಪಾಲಿಕೆ ಸಭಾಭವನದಲ್ಲಿಂದು ಚುನಾವಣಾಧಿಕಾರಿಯಾಗಿರುವ ಪ್ರಾದೇಶಿಕ ಆಯುಕ್ತ ಸಂಜಯ ಶೆಟ್ಟೆಣ್ಣವರ ಸಮ್ಮುಖದಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಬಿಜೆಪಿಯ ೩೦ನೇ ವಾರ್ಡಿನ ಸದಸ್ಯ ಬಡಿಗೇರ ೧೧ ಮತಗಳ ಅಂತರದಿಂದ ಮಹಾಪೌರರಾಗಿ ಆಯ್ಕೆಯಾದರು.ರಾಮಣ್ಣ ಪರ ೪೭ ಮತ ಚಲಾವಣೆಯಾದರೆ ಕಾಂಗ್ರೆಸ್ ಅಭ್ಯರ್ಥಿ ಇಮ್ರಾನ್ ಯಲಿಗಾರ ೩೬,ಹುಸೇನಬಿ ಮೂರು ಮತ ಪಡೆದರು.
ನಂತರ ನಡೆದ ಉಪಮೇಯರ್ ಚುನಾವಣೆಯಲ್ಲಿ ೬೯ನೇ ವಾರ್ಡಿನ ಸದಸ್ಯೆ ದುರ್ಗಮ್ಮ ಬಿಜವಾಡ ಸಹ ೪೭ ಮತ ಪಡೆದು ಚುನಾಯಿತರಾದರೆ, ಕಾಂಗ್ರೆಸ್‌ನ ಮಂಗಳಮ್ಮ ಹಿರೇಮನಿಗೆ ೩೬ ಮತಗಳು ಬಂದವು.ಎರಡೂ ಪ್ರಕ್ರಿಯೆಯಲ್ಲಿ ಮೂವರು ತಟಸ್ಥರಾದರೆ, ನಾಲ್ವರು ಗೈರಾದರು.ಮತದಾನ ಪ್ರಕ್ರಿಯೆಯಲ್ಲಿ ಜನಪ್ರತಿನಿಧಿಗಳಾದ ಪ್ರಹ್ಲಾದ ಜೋಶಿ, ಶಾಸಕರಾದ ಮಹೇಶ ಟೆಂಗಿನಕಾಯಿ, ಅರವಿಂದ ಬೆಲ್ಲದ, ಎಸ್.ವಿ.ಸಂಕನೂರ, ಪ್ರಸಾದ ಅಬ್ಬಯ್ಯ ಪಾಲ್ಗೊಂಡರು.ಬಿಜೆಪಿಯಲ್ಲಿ ಮಹಾಪೌರರ ಸ್ಥಾನಕ್ಕೆ ತೀವ್ರ ಪೈಪೋಟಿಯಿದ್ದರೂ ಹಿರಿತನಕ್ಕೆ ಮಣೆ ಹಾಕಿದ್ದು,ವಿಶ್ವಕರ್ಮ ಸಮುದಾಯದ ಪಶ್ಚಿಮ ಶಾಸಕ ಅರವಿಂದ ಬೆಲ್ಲದ ನಿಕಟವರ್ತಿಯಾಗಿರುವ ಬಡಿಗೇರ ಅಂತಿಮಗೊಂಡರು.
ನಿನ್ನೆ ಹುಬ್ಬಳ್ಳಿಗೆ ಆಗಮಿಸಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ನೇತೃತ್ವದಲ್ಲಿ ರಾತ್ರಿ ಸಭೆ ನಡೆದರೂ ಯಾವುದೇ ಅಂತಿಮ ನಿರ್ಧಾರ ಕೈಗೊಂಡಿರಲಿಲ್ಲ. ಇಂದು ಬೆಳಿಗ್ಗೆ ಜೋಶಿಯವರು ಶಾಸಕರುಗಳಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ಪ್ರದೀಪ ಶೆಟ್ಟರ್, ಎಸ್.ವಿ.ಸಂಕನೂರ, ಲಿಂಗರಾಜ ಪಾಟೀಲ, ಮಹಾನಗರ ಅಧ್ಯಕ್ಷ ತಿಪ್ಪಣ್ಣ ಮಜ್ಜಗಿ ಎಲ್ಲರೂ ಸುದೀರ್ಘವಾಗಿ ಚರ್ಚಿಸಿ ರಾಮಣ್ಣ ಬಡಿಗೇರ ಮತ್ತು ದುರ್ಗಮ್ಮ ಹೆಸರು ಅಂತಿಮಗೊಳಿಸಿ ಪ್ರಕಟಿಸಿದರು.
ಜಾತ್ಯತೀತ ಜನತಾ ದಳದಿಂದ ಎರಡು ಬಾರಿ ಹಾಗೂ ಬಿಜೆಪಿಯಿಂದ ಎರಡು ಬಾರಿ ಆಯ್ಕೆಯಾಗಿರುವ ಬಡಿಗೇರ ಅವರಿಗೆ ಗೌನ್ ಧರಿಸುವ ಅವಕಾಶ ಎರಡು ಬಾರಿ ಕೈ ತಪ್ಪಿತ್ತು. ಇಂದು ಅದು ಈಡೇರಿದೆ. ಪಕ್ಷೇತರಳಾಗಿ ಗೆದ್ದು ೨೦೨೨ರಲ್ಲಿ ಬಿಜೆಪಿಗೆ ಸೇರ್ಪಡೆಯಾದ ದುರ್ಗಮ್ಮ ಬಿಜವಾಡ ಅವರಿಗೆ ಪಕ್ಷಕ್ಕೆ ಸೇರಿಸಿಕೊಳ್ಳುವ ಸಂದರ್ಭದಲ್ಲಿ ಉಪಮೇಯರ್ ಹುದ್ದೆ ಭರವಸೆ ನೀಡಿದ್ದು ಅದು ಒಲಿದು ಬಂದಿದೆ.೪೩ನೇ ವಾರ್ಡಿನ ಬೀರಪ್ಪ ಖಂಡೇಕರ ಕುರುಬ ಸಮುದಾಯಕ್ಕೆ ಪಟ್ಟ ನೀಡಲೇಬೇಕೆಂದು ತೀವ್ರ ಒತ್ತಡ ತಂದ ನಿನ್ನೆ ಯಾವುದೇ ಅಂತಿಮ ನಿರ್ಧಾರಕ್ಕೆ ಬಂದಿರಲಿಲ್ಲ.
ಗೋಕುಲ ರಸ್ತೆಯ ಅನಂತ ಗ್ರ್ಯಾಂಡ್ ಹೊಟೆಲ್‌ದಲ್ಲಿಯೇ ಬಿಜೆಪಿ ಸದಸ್ಯರು ನಿನ್ನೆ ಮಧ್ಯಾಹ್ನದಿಂದಲೇ ವಾಸ್ತವ್ಯ ಹೂಡಿದ್ದು ಇಂದು ಬೆಳಿಗ್ಗೆ ಅಭ್ಯರ್ಥಿಯನ್ನು ಶಾಸಕ ಮಹೇಶ ಟೆಂಗಿನಕಾಯಿ ಘೋಷಣೆ ಮಾಡಿದ ನಂತರ ನಾಮಪತ್ತ ಸಲ್ಲಿಸಲು ಎಲ್ಲರೂ ಜತೆಯಾಗಿ ಬಂದರು.
ಮೇಯರ್ ಸ್ಥಾನಕ್ಕೆ ೩ ಮತ್ತು ಉಪ ಮೇಯರ್ ಸ್ಥಾನಕ್ಕೆ ೨ ನಾಮಪತ್ರ ಸಲ್ಲಿಕೆಯಾಗಿವೆ.
ಬಿಜೆಪಿಯಿಂದ ಮೇಯರ್ ಸ್ಥಾನಕ್ಕೆ ರಾಮಣ್ಣ ಬಡಿಗೇರ ಹಾಗೂ ಉಪ ಮೇಯರ್ ಸ್ಥಾನಕ್ಕೆ ದುರ್ಗಮ್ಮ ಬಿಜವಾಡ ನಾಮಪತ್ರ ಸಲ್ಲಿಸಿದ್ದರೆ,ವಿಪಕ್ಷ ಕಾಂಗ್ರೆಸ್ ಪಾಳಯದಿಂದ ಇಮ್ರಾನ್ ಎಲಿಗಾರ ಮೇಯರ್ ಹುದ್ದೆಗೆ ಹಾಗೂ ಮಂಗಳಾ ಹಿರೇಮನಿ ಉಪ ಮೇಯರ್ ಸ್ಥಾನಕ್ಕೆ ಉಮೇದುವಾರಿಕೆ ಸಲ್ಲಿಸಿದ್ದಾರೆ.ಕೇವಲ ಮೂರು ಸದಸ್ಯರನ್ನು ಹೊಂದಿರುವ ಎಐಎಂಐಎಂ ಪಕ್ಷದ ಹುಸೇನಬಿ ನಾಲತವಾಡ ಕೂಡ ಮೇಯರ್ ಹುದ್ದೆಗೆ ಉಮೇದುವಾರಿಕೆ ಸಲ್ಲಿಸಿದ್ದರು.
ವರದಿ :-ಸುಧೀರ್ ಕುಲಕರ್ಣಿ