ಮುಂಬೈ: ಜನಪ್ರಿಯ ರಿಯಾಲಿಟಿ ಶೋ ಕೌನ್ ಬನೇಗಾ ಕರೋಡ್‌ಪತಿಯಲ್ಲಿ ಬಾಗಲಕೋಟೆಯ ಬಡ ಯುವಕನೊಬ್ಬ ಅಚ್ಚರಿಯ ಸಾಧನೆ ಮಾಡಿದ್ದಾನೆ. ಬಡ ಕಾರ್ಮಿಕ ಬರೋಬ್ಬರಿ 50 ಲಕ್ಷ ರೂ. ಗೆಲ್ಲುವ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾನೆ.
ಬಾಗಲಕೋಟೆಯ ರಬಕವಿನಹಟ್ಟಿ ತಾಲೂಕಿನ ಮಹಾಲಿಂಗಪುರ ಪಟ್ಟಣದ ಯುವಕ ರಮ್‌ಜಾನ್ ಮಲಿಕ್ ಬಾಬ್ ಫೀರಜಾದೆ ನಟ ಅಮಿತಾಬ್ ಬಚ್ಚನ್ ನಡೆಸಿಕೊಂಡು ಬರುತ್ತಿರುವ ಹಿಂದಿಯ ಕೌನ್ ಬನೇಗಾ ಕರೋಡ್‌ಪತಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಕಾರ್ಯಕ್ರಮದ ಕೊನೆಯವರೆಗೂ ಅತ್ಯುತ್ತಮವಾಗಿ ಆಡಿದ್ದಾರೆ. ಒಂದರಮೇಲೊಂದು ಪ್ರಶ್ನೆಗಳಿಗೆ ಉತ್ತರಿಸುತ್ತಾ 50 ಲಕ್ಷ ರೂ. ಹಣವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.
ರಮ್‌ಜಾನ್ ಮಲಿಕ್ ಅವರ ತಂದೆ ಮಹಾಲಿಂಗಪುರದಲ್ಲಿ ವೆಲ್ಡಿಂಗ್ ಕೆಲಸ ಮಾಡಿಕೊಂಡಿದ್ದಾರೆ. ರಮ್‌ಜಾನ್ ತಮ್ಮ ತಂದೆಗೆ ಸಹಾಯ ಮಾಡುತ್ತಿದ್ದು, ತನ್ನ ಕುಟುಂಬಕ್ಕೆ ಆರ್ಥಿಕ ಸಹಾಯ ಮಾಡಲು ಇತರ ಚಿಕ್ಕ ಪುಟ್ಟ ಕೆಲಸವನ್ನು ಕೂಡಾ ಮಾಡಿಕೊಂಡು ಬಂದಿದ್ದಾರೆ.
ಬಿಎ ಮುಗಿಸಿರುವ ಅವರು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದರು. ಇತ್ತೀಚೆಗೆ ಕೌನ್ ಬನೇಗಾ ಕರೋಡ್‌ಪತಿಗೆ ಅರ್ಜಿ ಹಾಕಿದ್ದ ಅವರಿಗೆ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿತ್ತು. ಅದನ್ನು ಸದುಪಯೋಗಪಡಿಸಿಕೊಂಡ ಅವರು ಈಗ 50 ಲಕ್ಷ ರೂ.ಯೊಂದಿಗೆ ಹಿಂದಿರುಗಿದ್ದಾರೆ.