ಬೆಳಗಾವಿ: ಜಿಲ್ಲೆಯ ಚಿಕ್ಕೋಡಿಯ ಇಟ್ನಾಳ ಗ್ರಾಮದ ರೈತ ದಂಪತಿ ಶಿವಪ್ಪ ಶೆಂಡೂರೆ ಮತ್ತು ಶಾಂತಾ ಶೆಂಡೂರೆ ಸಾಕಿದ ಎರಡು ಬೀಟಲ್ ತಳಿಯ ಮೇಕೆಗಳು ₹5.10 ಲಕ್ಷಕ್ಕೆ ಮಾರಾಟವಾಗಿವೆ.
ಒಂದು ಮೇಕೆ ₹3 ಲಕ್ಷಕ್ಕೆ ಮತ್ತು ಇನ್ನೊಂದು ₹2.10 ಲಕ್ಷಕ್ಕೆ ವಿಜಯಪುರದ ವ್ಯಾಪಾರಿಗಳಾದ ಮೋಜಿಮ್ ಮತ್ತು ಆಸಿಫ್‌ಗೆ ಬಿಕರಿಯಾಗಿದೆ.
ಈ ದಾಖಲೆಯ ಮಾರಾಟವು ಈ ತಳಿಯ ಮೇಕೆಗಳಿಗೆ ಇರುವ ಭಾರೀ ಬೇಡಿಕೆಯನ್ನು ಎತ್ತಿ ತೋರಿಸುತ್ತದೆ.
ಬಕ್ರೀದ್‌ಗೆ 15 ದಿನಗಳ ಹಿಂದೆಯೇ ವಿಜಯಪುರದ ವ್ಯಾಪಾರಿಗಳು ಈ ಎರಡು ಮೇಕೆಗಳಿಗೆ ಮುಂಗಡ ಹಣ ನೀಡಿ ಕಾಯ್ದಿರಿಸಿದ್ದರು. ಪೂರ್ಣ ಹಣವನ್ನು ಪಾವತಿಸಿ ಖರೀದಿಯನ್ನು ಪೂರ್ಣಗೊಳಿಸಿದರು.
ಮಾರಾಟದ ವೇಳೆ ಮೇಕೆಗಳಿಗೆ ಗುಲಾಲು ಎರಚಿ, ಪೂಜೆ ಸಲ್ಲಿಸಿ, ಹೂವಿನ ಹಾರ ಹಾಕಿ, ಆರತಿ ಬೆಳಗಿ ಗೌರವಯುತವಾಗಿ ಬೀಳ್ಕೊಡಲಾಯಿತು.
ಈ ಎರಡೂ ಮೇಕೆಗಳು 2.5 ವರ್ಷ ವಯಸ್ಸಿನವು, ತಲಾ ಎರಡು ಕ್ವಿಂಟಲ್ ತೂಕ ಮತ್ತು 4 ಅಡಿ ಎತ್ತರವನ್ನು ಹೊಂದಿವೆ. ಇವುಗಳಿಗೆ ಪ್ರತಿದಿನ ಮೆಕ್ಕೆಜೋಳದ ನುಚ್ಚು, ಶೇಂಗಾದ ಹಿಂಡಿ, ಸದಕ, ಕಾಳು ಮುಂತಾದ ಪೌಷ್ಟಿಕ ಆಹಾರವನ್ನು ನೀಡಲಾಗುತ್ತಿತ್ತು.
ಪಂಜಾಬ್ ಮೂಲದ ಬೀಟಲ್ ತಳಿಯ ಮೇಕೆಗಳು ದೊಡ್ಡ ದೇಹ, ಉದ್ದನೆಯ ಕಿವಿಗಳು ಮತ್ತು ಸಣ್ಣ ಮುಖವನ್ನು ಹೊಂದಿವೆ.
ಇವುಗಳನ್ನು ಮಾಂಸಕ್ಕಾಗಿ ಸಾಕಲಾಗುತ್ತದೆ ಮತ್ತು ಜಮ್ಮಾಪುರಿ, ಮಲಬಾರಿ ತಳಿಗಳಿಗೆ ಹೋಲಿಕೆಯಾಗಿ ಲಾಹೋರಿ ಮೇಕೆ ಎಂದೂ ಕರೆಯಲಾಗುತ್ತದೆ. ಈ ಭಾಗದಲ್ಲಿ ಬೀಟಲ್ ತಳಿಯ ಮೇಕೆಗಳ ಮಾಂಸಕ್ಕೆ ಭಾರೀ ಬೇಡಿಕೆ ಇದ್ದು, ಇದೇ ಕಾರಣಕ್ಕೆ ಇವು ಚಿನ್ನದ ಬೆಲೆಗೆ ಮಾರಾಟವಾಗುತ್ತವೆ.
ಶಿವಪ್ಪ ಶೆಂಡೂರೆ ಮತ್ತು ಶಾಂತಾ ದಂಪತಿಗೆ ಮೂರು ಎಕರೆ ಜಮೀನಿದ್ದು, ಕೃಷಿಯ ಜೊತೆಗೆ ಉಪಕಸುಬಾಗಿ ಬೀಟಲ್ ತಳಿಯ ಮೇಕೆಗಳನ್ನು ಸಾಕುತ್ತಾರೆ. ಕಳೆದ ವರ್ಷ ಇವರು 11 ತಿಂಗಳ ಮೇಕೆ ಮರಿಯನ್ನು ₹1.80 ಲಕ್ಷಕ್ಕೆ ಮಾರಾಟ ಮಾಡಿದ್ದರು.
ಈ ಯಶಸ್ಸಿನಿಂದ ಪ್ರೇರಿತರಾಗಿ, ಈ ಬಾರಿ ನಾಲ್ಕು ಮೇಕೆ ಮರಿಗಳನ್ನು 1.60 ಲಕ್ಷಕ್ಕೆ ಖರೀದಿಸಿದ್ದರು. ಆದರೆ, ಎರಡು ಮರಿಗಳು ಸಾವನ್ನಪ್ಪಿದವು. ಉಳಿದ ಎರಡು ಮರಿಗಳನ್ನು 11 ತಿಂಗಳ ಕಾಲ ಸಾಕಿ, ಈಗ 5.10 ಲಕ್ಷಕ್ಕೆ ಮಾರಾಟ ಮಾಡಿ ದ್ದಾರೆ.



