ತುರುವೇಕೆರೆ : ತಾಲೂಕಿನ ಮಾಯಸಂದ್ರ ಹೋಬಳಿಯ ಕಣಕೂರು ಗ್ರಾಮದಲ್ಲಿ ನಿರ್ಮಿಸಲಾಗಿರುವ ಶ್ರೀ ಲಕ್ಷ್ಮೀವೆಂಕಟೇಶ್ವರ ಸ್ವಾಮಿಯವರ ನೂತನ ದೇವಾಲಯ ಉದ್ಘಾಟನೆ, ಪ್ರತಿಷ್ಠಾಪನೆ ಹಾಗೂ ತಿರುಪತಿ ತಿರುಮಲದಿಂದ ಆಗಮಿಸುತ್ತಿರುವ ಶ್ರೀ ಲಕ್ಷ್ಮೀವೆಂಕಟೇಶ್ವರ ಸ್ವಾಮಿಯ ಕಲ್ಯಾಣೋತ್ಸವಕ್ಕೆ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಬಾಲಾಜಿ ಸೇವಾ ಟ್ರಸ್ಟ್ ಅಧ್ಯಕ್ಷ ಬಾಲಾಜಿ ಕುಮಾರ್ ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಶ್ರೀ ಲಕ್ಷ್ಮೀವೆಂಕಟೇಶ್ವರ ಸ್ವಾಮಿಯವರ (ಶ್ರೀ ನುಡುಕೇರಪ್ಪಸ್ವಾಮಿ ದೇವಾಲಯ) ದೇವಾಲಯವನ್ನು ಬಾಲಾಜಿ ಸೇವಾ ಟ್ರಸ್, ಕಣಕೂರು ಗ್ರಾಮಸ್ಥರು ಹಾಗೂ ಭಕ್ತಾಧಿಗಳ ಸಹಕಾರದೊಂದಿಗೆ ನಿರ್ಮಿಸಲಾಗಿದೆ. ಕಣಕೂರು ನಮ್ಮ ತಾಯಿಯವರ ತವರು ಮನೆಯಾಗಿದೆ. ನಮ್ಮ ಮನೆಯ ಕುಲದೇವರು ತಿರುಪತಿ ತಿಮ್ಮಪ್ಪಸ್ವಾಮಿ. ಕಣಕೂರಿನಲ್ಲಿ ದೇವಸ್ಥಾನ ನಿರ್ಮಾಣ ನಮ್ಮ ತಾಯಿಯವರ ಕನಸಾಗಿತ್ತು. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರೊಡನೆ ಚರ್ಚಿಸಿ, ಗ್ರಾಮಸ್ಥರ ಸಹಕಾರದೊಂದಿಗೆ ದೇವಾಲಯ ನಿರ್ಮಾಣ ಮಾಡಿದ್ದೇವೆ. ಆ ಮೂಲಕ ತಾಯಿಯವರ ಕನಸನ್ನು ನನಸು ಮಾಡುವ ಸೌಭಾಗ್ಯ ನನ್ನದಾಗಿದೆ ಹಾಗೂ ದೇವಾಲಯದ ನಿರ್ಮಾಣದಂತಹ ಪುಣ್ಯಕಾರ್ಯದಲ್ಲಿ ಅಗತ್ಯ ಸಹಕಾರ ನೀಡಿದ ಗ್ರಾಮಸ್ಥರನ್ನು ಮರೆಯುವಂತಿಲ್ಲ ಎಂದರು.
ಶ್ರೀ ಲಕ್ಷ್ಮೀವೆಂಕಟೇಶ್ವರ ಸ್ವಾಮಿಯವರ ದೇವಾಲಯದ ನಿರ್ಮಾಣಕ್ಕೆ ಅಂದಾಜು ಒಂದು ಕೋಟಿ ರೂ ವೆಚ್ಚವಾಗಿದೆ. ಫೆಬ್ರವರಿ 04 ರಿಂದ 06ರವರೆಗೆ ಮೂರು ದಿನಗಳ ಕಾಲ ವಿವಿಧ ರೀತಿಯ ಪೂಜಾ ಕೈಂಕರ್ಯಗಳು, ಹೋಮ ಹವನಗಳು ನೆರವೇರಲಿದೆ. ಫೆಬ್ರವರಿ 06 ರಂದು ತಿರುಪತಿಯ ಟಿಟಿಡಿಯಿಂದ ಆಗಮಿಸುವ ಪುರೋಹಿತರಿಂದ ಸ್ವಾಮಿಗೆ ಕಲ್ಯಾಣೋತ್ಸವ ನಡೆಯಲಿದೆ. ಅಭೂತಪೂರ್ವ ಶ್ರೀ ಲಕ್ಷ್ಮೀವೆಂಕಟೇಶ್ವರ ಸ್ವಾಮಿ ಕಲ್ಯಾಣೋತ್ಸವ ಕಾರ್ಯಕ್ರಮಕ್ಕೆ ತಾಲೂಕು ಹಾಗೂ ವಿವಿದೆಢೆಯಿಂದ ಸುಮಾರು ಸುಮಾರು ಒಂದು ಲಕ್ಷ ಜನರು ಬರುವ ನಿರೀಕ್ಷೆ ಇದೆ. ಹಿರಿಯ ನಾಗರೀಕರಿಗೆ, ವಿಶೇಷಚೇನರಿಗೆ ಸೇರಿದಂತೆ ಭಕ್ತಾಧಿಗಳಿಗೆ ತೊಂದರೆಯಾಗದಂತೆ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಯಾವುದೇ ಅಹಿತರಕರ ಘಟನೆ ಸಂಭವಿಸದಂತೆ 300 ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಗಳು, ಅಗ್ನಿಶಾಮಕ ದಳ, ತುರ್ತು ವೈದ್ಯಕೀಯ ಸೌಲಭ್ಯ ಎಲ್ಲವನ್ನೂ ಸ್ಥಳದಲ್ಲಿ ವ್ಯವಸ್ಥೇ ಮಾಡಲಾಗಿದೆ. ಎಲ್ಲಾ ಭಕ್ತರಿಗೂ ವಿಶೇಷ ಲಾಡು ಪ್ರಸಾದ, ಮೂರು ದಿನಗಳ ಕಾಲ ಮಹಾದಾಸೋಹ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
ಈಗಾಗಲೇ ಕಣಕೂರು ಗ್ರಾಮಕ್ಕೆ ಲಡ್ಡು ತಯಾರಿಸಲು ಹಾಗೂ ಮೂರು ದಿನಗಳ ಕಾಲ ಭಕ್ತರಿಗೆ ಪ್ರಸಾದ ವ್ಯವಸ್ಥೆ ಸಿದ್ದಪಡಿಸಲು ಬಾಣಸಿಗರು ಆಗಮಿಸಿದ್ದು, ಲಡ್ಡು ತಯಾರಿಕೆಯಲ್ಲಿ ತೊಡಗಿದ್ದಾರೆ. ಪ್ರಸಾದ ವಿತರಿಸಲು ಸುಮಾರು 50ಕ್ಕೂ ಅಧಿಕ ಪ್ರಸಾದ ವಿತರಣಾ ಕೌಂಟರ್ ಮಾಡಲಾಗಿದೆ. ದೇವರ ದರ್ಶನ ಪಡೆದ ಭಕ್ತರಿಗೆ ಪುಳೀಯೋಗರೆ, ಲಡ್ಡು ಪ್ರಸಾದ ಸ್ಥಳದಲ್ಲೇ ನೀಡಲಾಗುವುದು. ಉಳಿದಂತೆ ಭಕ್ತರಿಗೆ ಕೌಂಟರ್ ನಲ್ಲಿ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿದೆ. ಯಾವುದೇ ಭಕ್ತರು, ನಾಗರೀಕರು ಕಲ್ಯಾಣೋತ್ಸವ ದರ್ಶನ ಮಾಡದೆ, ಪ್ರಸಾದ ಸ್ವೀಕರಿಸದೆ ಹೋಗಬಾರದೆನ್ನುವ ಉದ್ದೇಶದಿಂದ ಎಲ್ಲವನ್ನು ಸುಸಜ್ಜಿತ ರೀತಿಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ತುರುವೇಕೆರೆ, ಗುಬ್ಬಿ, ತುಮಕೂರು, ಕುಣಿಗಲ್, ಬೆಂಗಳೂರು ಮುಂತಾದ ಕಡೆಗಳ ಸಾರಿಗೆ ಇಲಾಖೆ ಅಧಿಕಾರಿಗಳಲ್ಲಿ ಮನವಿ ಮಾಡಿದ್ದು, ಹೆಚ್ಚಿನ ಬಸ್ ಸೌಕರ್ಯ ಒದಗಿಸಲು ವಿನಂತಿಸಲಾಗಿದೆ ಎಂದರು.
ಗೋಷ್ಟಿಯಲ್ಲಿ ದೇವರಾಜು, ರೈತ ಸಂಘದ ಅಧ್ಯಕ್ಷ ಕಣಕೂರು ಚಂದ್ರಶೇಖರ್, ಯುವ ಮುಖಂಡ ಕುಮಾರ್, ಮಾಜಿ ಪ್ರಧಾನ ಟಿ.ಜವರಪ್ಪ, ಗುಡಿಗೌಡರಾದ ಕೆ.ಎಸ್.ಗಂಗಯ್ಯ, ಜಿ.ಸಿ.ಶಿವಕುಮಾರ್, ಎನ್.ಸತೀಶ್, ಕೆ.ಎಲ್.ರಾಜು, ಪಿಎಸಿಎಸ್ ಅಧ್ಯಕ್ಷ ಶ್ರೀನಿವಾಸ್, ಅರ್ಚಕರಾದ ಸುದರ್ಶನ್, ಹುಚ್ಚೇಗೌಡ, ನರಸಿಂಹಮೂರ್ತಿ, ಶ್ರೀನಿವಾಸ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವರದಿ : ಗಿರೀಶ್ ಕೆ ಭಟ್




