ನವದೆಹಲಿ: ನಮ್ಮ ರಾಜಧಾನಿ, ಸಿಲಿಕಾನ್ ಸಿಟಿ ಅಂತ ಕರೆಸಿಕೊಳ್ಳುವ ಬೆಂಗಳೂರಲ್ಲಿ ಎಂದೆಂದಿಗೂ ಸರಿಹೋಗಲು ಸಾಧ್ಯವಿಲ್ಲದ ಸಮಸ್ಯೆಗಳು ಅಂದ್ರೆ ಒಂದು ರಸ್ತೆಗಳು ಮತ್ತೊಂದು ಟ್ರಾಫಿಕ್ ಜಾಮ್ ಕಿರಿಕಿರಿ. ಈಗಾಗ್ಲೇ ಬೆಂಗಳೂರು ರಸ್ತೆ ಗುಂಡಿಗಳು ಮತ್ತು ಟ್ರಾಫಿಕ್ ವಿಚಾರವಾಗಿ ದೇಶಮಟ್ಟದಲ್ಲೇ ಹಲವು ಬಾರಿ ಸುದ್ದಿಯಾಗಿದೆ. ಆದರೆ ಈಗ ಬೆಂಗಳೂರಿಗೆ ಮತ್ತೊಂದು ಹಣೆ ಪಟ್ಟಿ ಸಿಕ್ಕಿದೆ.
2024 ರ ಟಾಮ್ ಟಾಮ್ ಟ್ರಾಫಿಕ್ ಇಂಡೆಕ್ಸ್ ವರದಿ ಪ್ರಕಟ ಮಾಡಿದ್ದು, ವಿಶ್ವದ 6 ಖಂಡಗಳ, 55 ದೇಶಗಳ 387 ನಗರಗಳಿಂದ ಟ್ರಾಫಿಕ್ ಸಮಸ್ಯೆಯನ್ನು ಅಧ್ಯಯನ ಮಾಡಿ ಈ ವರದಿ ತಯಾರಿಸಿದೆ. ಈ ಪೈಕಿ ಅತಿ ಹೆಚ್ಚು ವಾಹನ ದಟ್ಟಣೆಯ ಸಮಸ್ಯೆಯುಳ್ಳ ಏಷ್ಯಾದ ಅತ್ಯಂತ ಕೆಟ್ಟ ನಗರಗಳಲ್ಲಿ ಭಾರತದ ಎರಡು ನಗರಗಳು ಸ್ಥಾನ ಪಡೆದಿವೆ.
ಈ ಪ್ರಕಾರವಾಗಿ ಜಾಗತಿಕ ಪಟ್ಟಿಯಲ್ಲಿ ಲಂಡನ್ ಅಗ್ರ ಸ್ಥಾನದಲ್ಲಿದ್ದರೆ, ನಮ್ಮ ಬೆಂಗಳೂರು 6ನೇ ಸ್ಥಾನದಲ್ಲಿದ್ದೆ. ಈ ವರದಿ ಹೇಳುವಂತೆ ಬೆನಗಳೂರಿನ ಪ್ರಯಾಣಿಕರು ಪ್ರತಿ ವರ್ಷ ಬರೋಬ್ಬರಿ 132 ಗಂಟೆಗಳನ್ನು ಟ್ರಾಫಿಕ್ ನಲ್ಲಿಯೇ ಕಳೆದುಕೊಳ್ಳುತ್ತಿದ್ದಾರೆ.
ಇನ್ನು ಬೆಂಗಳೂರಿನ ನಂತರ ಮಹಾರಾಷ್ಟ್ರದ ಪುಣೆ 7ನೇ ಸ್ಥಾನವನ್ನು ಪಡೆದುಕೊಂಡಿದೆ, ಅಲ್ಲಿ ಜನರು ಸರಾಸರಿ 27 ನಿಮಿಷ ಮತ್ತು 10 ಸೆಕೆಂಡುಗಳನ್ನು ಟ್ರಾಫಿಕ್‌ನಲ್ಲಿ ಕಳೆಯುತ್ತಾರೆ. ಅಂದರೆ 128 ಗಂಟೆಗಳು. ಅಲ್ಲದೆ, ಭಾರತದ ನಗರಗಳಾದ ನವದೆಹಲಿ ಮತ್ತು ಮುಂಬೈ ಕೂಡ ಪಟ್ಟಿಯಲ್ಲಿದ್ದು, ಕ್ರಮವಾಗಿ 44 ಮತ್ತು 54 ಸ್ಥಾನಗಳನ್ನು ಪಡೆದಿವೆ.
ಇನ್ನು ಕೇವಲ ಏಷ್ಯ ಖಂಡವನ್ನು ಪರಿಗಣಿಸಿದಾಗ ವಾಹನ ದಟ್ಟಣೆಗೆ ಮೊದಲ ಸ್ಥಾನದಲ್ಲಿ ಏಷ್ಯಾದ ಕೆಟ್ಟ ನಗರವಾಗಿ ಬೆಂಗಳೂರು ಸ್ಥಾನ ಪಡೆದುಕೊಂಡಿದೆ. ಇನ್ನಾದ್ರೂ ರಾಜ್ಯ ಸರ್ಕಾರ ಮತ್ತು ಬಿಬಿಎಂಪಿ ಎಚ್ಚೆತ್ತು ಇದಕ್ಕೊಂದು ಮುಕ್ತಿ ಹಾಡದಿದ್ದಲ್ಲಿ, ಬೆಂಗಳೂರು ಇನ್ನಷ್ಟು ಕುಖ್ಯಾತಿಗಳಿಸೋದಂತು ಪಕ್ಕಾ ..