ಬೆಳಗಾವಿ: ಅಬಕಾರಿ ಇಲಾಖೆಯ ನಿಯಮಗಳನ್ನು ಗಾಳಿಗೆ ತೂರಿ ಬೆಳಗಾವಿ ಪಟ್ಟಣದಲ್ಲಿ ಸೂರ್ಯೋದಯಕ್ಕೂ ಮುನ್ನ ವೈನ್ ಶಾಪ್‌ಗಳ ಬಾಗಿಲು ತೆರೆದಿರುತ್ತವೆ. ಮದ್ಯವ್ಯಸನಿಗಳಂತೂ ಈ ಮದ್ಯದಂಗಡಿಗಳ ಮುಂದೆ ಬೆಳಗ್ಗೆ ಐದು ಗಂಟೆಯಿಂದಲೇ ಕಾಯುತ್ತ ಕುಳಿತಿರುತ್ತಾರೆ.
ಹೌದು. ಬೆಳಗಾವಿ ಪಟ್ಟಣದ ಖಾಸಭಾಗದ ಸಿದ್ದಾರ್ಥ್ ಬಾರ್ ಆಂಡ್ ರೆಸ್ಟೋರೆಂಟ್, ಕಡೇ ಬಜಾರದ ಮಿಲೇನಿಯಂ ಬಾರ್, ಶಿವಾಜಿ ಗಾರ್ಡನ್ ಹತ್ತಿರದ ಮಹಾಲಕ್ಷ್ಮಿ ಪ್ಯಾಲೇಸ್ ಸೇರಿದಂತೆ ಇನ್ನೂ ಹಲವಾರು ಮದ್ಯದಂಗಡಿಗಳು ಎಗ್ಗಿಲ್ಲದೆ ಬೆಳ್ಳಂಬೆಳಗ್ಗೆ ವ್ಯಾಪಾರ ಶುರು ಮಾಡುತ್ತಿವೆ.
ಬೆಳಿಗ್ಗೆ 10ರ ನಂತರ ಮದ್ಯದ ಅಂಗಡಿಗಳನ್ನ ತೆರೆಯಬೇಕು ಎನ್ನುವನಿಯಮವಿದ್ದರೂ ಅದನ್ನ ಗಾಳಿಗೆ ತೂರಿ ಬೆಳಗ್ಗೆ 6 ಗಂಟೆಯೊಳಗೆ ಮದ್ಯ ಮಾರಾಟ ನಡೆಯುತ್ತಿದೆ. ಈ ವಿಚಾರ ಅಬಕಾರಿ ಇಲಾಖೆ ಅಧಿಕಾರಿಗಳಿಗೆತಿಳಿದಿದ್ದರೂ ಕೂಡ ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ.
ಬೆಳ್ಳಂಬೆಳಗ್ಗೆ ಮದ್ಯದಂಗಡಿ ತೆರೆಯುವುದರಿಂದ ಕೂಲಿ ಕಾರ್ಮಿಕರು ಕೆಲಸಕ್ಕೆ ಹೋಗದೆ ಮದ್ಯದ
ಅಮಲಿನಲ್ಲೇ ಕಾಲಕಳೆಯುತ್ತಿದ್ದಾರೆ. ಇದರಿಂದ ಬಡಕುಟುಂಬಗಳು ಬೀದಿಗೆ ಬರುವಂತಾಗಿದೆ ಎಂದು
ಸ್ಥಳೀಯ ಹೋರಾಟಗಾರರು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ನಿಯಮ
ಬಾಹಿರವಾಗಿ ಬೇಗನೆ ತೆರೆಯುವ ವೈನ್, ಬಾರ್ ಗಳ ಅನುಮತಿ ರದ್ದುಗೊಳಿಸಬೇಕು ಅಂತ ಸಾರ್ವಜನಿಕರು
ಆಗ್ರಹಿಸಿದ್ದಾರೆ.
ವರದಿ: ಉಮೇಶ ಜಿ.