ಜೈಪುರ:ಹೋಳಿಗೂ ಮುನ್ನ 25 ವರ್ಷದ ಯುವಕನೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ತನ್ನ ಮೈಮೇಲೆ ಬಣ್ಣ ಬಳಿಯುವುದನ್ನು ನಿರಾಕರಿಸಿದ್ದಕ್ಕೆ ಯುವಕನನ್ನು ಕೊಲೆ ಮಾಡಿದ ಭಯಾನಕ ಘಟನೆ ರಾಜಸ್ಥಾನದ ದೌಸಾ ಜಿಲ್ಲೆಯಲ್ಲಿ ನಡೆದಿದೆ.
25 ವರ್ಷದ ಯುವಕನನ್ನು ಕತ್ತು ಹಿಸುಕಿ ಕೊಲ್ಲಲಾಗಿದೆ. ಹಂಸರಾಜ್ ಕೊಲೆಯಾದ ಯುವಕ. ಹಂಸರಾಜ್ ಬುಧವಾರ ಸಂಜೆ ಸ್ಥಳೀಯ ಗ್ರಂಥಾಲಯಕ್ಕೆ ತೆರಳಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದರು. ಈ ವೇಳೆ ಬಂದ ರಾಲ್ವಾಸ್ ಗ್ರಾಮದಲ್ಲಿ ಅಶೋಕ್, ಬಬ್ಲು ಮತ್ತು ಕಲುರಾಮ್ ಹಂಸರಾಜ್‌ಗೆ ಬಣ್ಣ ಹಚ್ಚಲು ಮುಂದಾಗಿದ್ದಾರೆ. ಆಗ ಹಂಸರಾಜ್ ಬಣ್ಣ ಹಚ್ಚಲು ನಿರಾಕರಿಸಿದ್ದಾರೆ.
ಹಂಸರಾಜ್ ಬಣ್ಣ ಬಳಿಯಲು ನಿರಾಕರಿಸಿದಾಗ, ಮೂವರು ಆತನನ್ನು ಒದ್ದು ಬೆಲ್ಟ್‌ಗಳಿಂದ ಹೊಡೆದಿದ್ದಾರೆ. ನಂತರ ಅವರಲ್ಲಿ ಒಬ್ಬರು ಆತನನ್ನು ಕತ್ತು ಹಿಸುಕಿ ಕೊಂದಿದ್ದಾನೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಎಸ್‌ಪಿ) ದಿನೇಶ್ ಅಗರ್‌ವಾಲ್ ತಿಳಿಸಿದ್ದಾರೆ.
ನಂತರ ಕೋಪಗೊಂಡ ಕುಟುಂಬ ಸದಸ್ಯರು ಮತ್ತು ಗ್ರಾಮಸ್ಥರು ಹಂಸರಾಜ್ ಅವರ ಮೃತದೇಹದೊಂದಿಗೆ ಪ್ರತಿಭಟನೆ ನಡೆಸಿದ್ದಾರೆ. ಗುರುವಾರ ಬೆಳಗಿನ ಜಾವ 1 ಗಂಟೆಯವರೆಗೆ ಈ ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನು ತಡೆಹಿಡಿದು ಕುಟುಂಬಸ್ಥರು ಪ್ರತಿಭಟನೆ ಮಾಡಿದ್ದಾರೆ. ಹಂಸರಾಜ್ ಕುಟುಂಬಕ್ಕೆ 50 ಲಕ್ಷ ರೂಪಾಯಿ ಪರಿಹಾರ, ಕುಟುಂಬದ ಒಬ್ಬ ಸದಸ್ಯನಿಗೆ ಸರ್ಕಾರಿ ಕೆಲಸ ಮತ್ತು ಆರೋಪಿ ಮೂವರನ್ನು ತಕ್ಷಣ ಬಂಧಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಪೊಲೀಸರ ಭರವಸೆಯ ನಂತರ ಮೃತದೇಹವನ್ನು ಹೆದ್ದಾರಿಯಿಂದ ತೆಗೆಯಲಾಯಿತು.