ತುರುವೇಕೆರೆ: ಮುಂಬರುವ 2028 ರ ಚುನಾವಣೆಯಲ್ಲಿ ಜನಪರವಾದ ಜೆಡಿಎಸ್ ಸರ್ಕಾರವನ್ನು ಬಹುಮತದಿಂದ ಅಧಿಕಾರಕ್ಕೆ ತರುವುದೇ ನನ್ನ ಗುರಿಯಾಗಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.
ಪಟ್ಟಣದಲ್ಲಿ ನಡೆದ ಜನರೊಂದಿಗೆ ಜನತಾದಳ ಹಾಗೂ ಜೆಡಿಎಸ್ ಸದಸ್ಯತ್ವ ಅಭಿಯಾನದಲ್ಲಿ ಬೃಹತ್ ಕಾರ್ಯಕರ್ತರ ಸಮೂಹವನ್ನು ಉದ್ದೇಶಿಸಿ ಮಾತನಾಡಿದ ಅವರು, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಲಕ್ಷಾಂತರ ಕಾರ್ಯಕರ್ತರ ಶ್ರಮದೊಂದಿಗೆ ಕಟ್ಟಿರುವ ಜೆಡಿಎಸ್ ಪಕ್ಷವನ್ನು ಮತ್ತೊಮ್ಮೆ ರಾಜ್ಯದಲ್ಲಿ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ತರುವುದು ಹಾಗೂ ಪಕ್ಷವನ್ನು ಮತ್ತಷ್ಟು ಸಂಘಟನಾತ್ಮಕವಾಗಿ ಬಲಿಷ್ಠವಾಗಿ ಕಟ್ಟುವುದು ನನ್ನ ಆಶಯವಾಗಿದೆ. ನಿಮ್ಮೆಲ್ಲರ ಆರ್ಶೀವಾದದಿಂದ ಪಕ್ಷವನ್ನು ಅಧಿಕಾರಕ್ಕೆ ತರುವುದಾಗಿ ತಾತ (ಹೆಚ್.ಡಿ.ದೇವೇಗೌಡರು) ಹಾಗೂ ತಂದೆ(ಹೆಚ್.ಡಿ.ಕುಮಾರಸ್ವಾಮಿ) ಅವರಿಗೆ ಮಾತು ಕೊಟ್ಟಿದ್ದೇನೆ. ಆ ಮಾತನ್ನು ಉಳಿಸಿಕೊಳ್ಳುವುದೇ ನನ್ನ ಮುಂದಿನ ಗುರಿಯಾಗಿದೆ ಎಂದರು.
ಜೆಡಿಎಸ್ ಪಕ್ಷ ಹಣಬಲದ ಪಕ್ಷವಲ್ಲ, ಜೆಡಿಎಸ್ ಪಕ್ಷಕ್ಕೆ ಕಾರ್ಯಕರ್ತರೇ ಉಸಿರು, ಕಾರ್ಯಕರ್ತರು ಶ್ರಮದಿಂದ ಕಟ್ಟಿರುವ ಪಕ್ಷ ನಮ್ಮದಾಗಿದೆ. ನಿಖಿಲ್ ಕುಮಾರಸ್ವಾಮಿ ಜೆಡಿಎಸ್ ರಾಜ್ಯಾಧ್ಯಕ್ಷನಾಗುವುದಕ್ಕಾಗಿ ರಾಜ್ಯ ಪ್ರವಾಸ ಹೊರಟಿದ್ದಾರೆಂದು ಕಾಂಗ್ರೆಸ್ ಪಕ್ಷದವರು ಮಾಡುತ್ತಿರುವ ಆರೋಪ ಸತ್ಯಕ್ಕೆ ದೂರವಾದುದು. ನಾನು ಯಾವುದೇ ಹುದ್ದೆಯ ಆಕಾಂಕ್ಷಿಯಾಗಿಲ್ಲ. ಕುತಂತ್ರ ರಾಜಕಾರಣದ ಮೂಲಕ ನನ್ನನ್ನು ಮೂರು ಬಾರಿ ಚುನಾವಣೆಯಲ್ಲಿ ಸೋಲಿಸಿದ್ದಾರೆ, ಇದಕ್ಕೆ ಎದೆಗುಂದುವ ವ್ಯಕ್ತಿ ನಾನಲ್ಲ. ಜನಪರ ಹೋರಾಟದ ರಾಜಕಾರಣ ಮಾಡುತ್ತಿರುವ ಕುಟುಂಬದಿಂದ ಬಂದವನು ನಾನು. ಪಕ್ಷ ಸಂಘಟಿಸುವ ಜವಾಬ್ದಾರಿಯನ್ನು ಹಿರಿಯರು ನನಗೆ ನೀಡಿದ್ದಾರೆ. ಮುಂಬರುವ ತಾಪಂ, ಜಿಪಂ ಚುನಾವಣೆಯಲ್ಲಿ ಪಕ್ಷವನ್ನು ಹೆಚ್ಚಿನ ಸ್ಥಾನದಲ್ಲಿ ಗೆಲ್ಲಿಸುವ ಹೊಣೆಗಾರಿಕೆ ನನ್ನಮೇಲಿದೆ. ಈ ನಿಟ್ಟಿನಲ್ಲಿ ರಾಜ್ಯಾದ್ಯಂತ ಸಂಘಟನೆಗಾಗಿ ಪ್ರವಾಸ ಕೈಗೊಂಡಿದ್ದೇನೆ. ೫೦ಲಕ್ಷಕ್ಕೂ ಮಿಗಿಲಾಗಿ ಪಕ್ಷದ ಸದಸ್ಯರನ್ನು ಮಾಡುವ ಉದ್ದೇಶದಿಂದ ಮಿಸ್ ಕಾಲ್ ಮೂಲಕ ಸದಸ್ಯತ್ವ ನೋಂದಣಿ ಅಭಿಯಾನವನ್ನು ಆರಂಭಿಸಲಾಗಿದೆ ಎಂದರು.
ದೇಶದಲ್ಲಿ ಯಾವ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷ ಅಧಿಕಾರದಲ್ಲಿದೆಯೋ ಆ ರಾಜ್ಯ ಸ್ಥಳೀಯ ಸಮಸ್ಯೆಗಳ ಬಗ್ಗೆ ಜನಪರವಾಗಿ, ರೈತಪರವಾಗಿ ಹೋರಾಟ ನಡೆಸಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುತ್ತಿದೆ. ಪ್ರಾದೇಶಿಕ ಪಕ್ಷ ಮಾತ್ರ ರೈತರು, ಬಡವರು, ಕೂಲಿಕಾರ್ಮಿಕರು, ದೀನದಲಿತರ ಹಾಗೂ ಸಮಗ್ರ ನಾಡಿನ ಅಭಿವೃದ್ದಿಯನ್ನು ಬಯಸುತ್ತದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷ ನೀವೇ ಕಟ್ಟಿ ಬೆಳೆಸಿದ ಜಾತ್ಯಾತೀತ ಜನತಾದಳ ಪಕ್ಷವನ್ನು ಬಹುಮತದಿಂದ ರಾಜ್ಯದಲ್ಲಿ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಮುಖಂಡರು, ಕಾರ್ಯಕರ್ತರು ಸಂಘಟನಾತ್ಮಕವಾಗಿ ದುಡಿಯಬೇಕೆಂದ ಅವರು, ಶಾಸಕ ಎಂ.ಟಿ.ಕೃಷ್ಣಪ್ಪ ಅವರು ರೈತಪರ, ಅಭಿವೃದ್ದಿ ಪರ ಚಿಂತನೆಯುಳ್ಳವರಾಗಿದ್ದು, ನಾಲ್ಕು ಬಾರಿ ಶಾಸಕರನ್ನಾಗಿ ಮಾಡಿದ್ದೀರಿ. ಮುಂದಿನ 2028 ರ ಚುನಾವಣೆಯಲ್ಲಿ ಮತ್ತೊಮ್ಮೆ ಗೆಲ್ಲಿಸಿ ನಮ್ಮ ಜೆಡಿಎಸ್ ಸರ್ಕಾರದಲ್ಲಿ ಸಚಿವರನ್ನಾಗಿ ಮಾಡುವಂತೆ ಕಾರ್ಯಕರ್ತರಿಗೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಶಾಸಕ ಎಂ.ಟಿ.ಕೃಷ್ಣಪ್ಪ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು, ಜೆಡಿಎಸ್ ಯುವ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ದೊಡ್ಡಾಘಟ್ಟ ಚಂದ್ರೇಶ್, ಜಿಲ್ಲಾಧ್ಯಕ್ಷ ಆಂಜನಪ್ಪ, ತಾಪಂ ಮಾಜಿ ಅಧ್ಯಕ್ಷ ಎಂ.ಡಿ.ರಮೇಶ್ ಗೌಡ, ಮುಖಂಡರಾದ ರಾಜೀವ್ ಕೃಷ್ಣಪ್ಪ, ವೆಂಕಟೇಶ್ ಕೃಷ್ಣಪ್ಪ ಸೇರಿದಂತೆ ತಾಲ್ಲೂಕಿನ ಮುಖಂಡರು, ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ: ಗಿರೀಶ್ ಕೆ ಭಟ್, ತುರುವೇಕೆರೆ