ಮೈಸೂರು : ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ವಿಜಯೇಂದ್ರ ನಡುವೆ ವಾಕ್ಸಮರ ಜೋರಾಗುತ್ತಲೇ ಇದೆ. ಉಪಚುನಾವಣೆ ಫಲಿತಾಂಶ ಬಂದ ಮೇಲಂತೂ ಯತ್ನಾಳ್ ಬಹಿರಂಗವಾಗಿಯೇ ಯಡಿಯೂರಪ್ಪ ಹಾಗೂ ವಿಜಯೇಂದ್ರರನ್ನು ಟೀಕಿಸುತ್ತಿದ್ದಾರೆ.
ವಕ್ಫ್ ವಿಚಾರದಲ್ಲೂ ಬಿಜೆಪಿ ನಾಯಕರು ಒಟ್ಟಾಗಿ ಹೋರಾಕ್ಕಿಳಿಯಲೇ ಇಲ್ಲ. ಇದೀಗ ಬಿಜೆಪಿಯಲ್ಲಿ ವಿಜಯೇಂದ್ರ ಒಂದು ಬಣ ಯತ್ನಾಳ್ ಒಂದು ಬಣ ಎಂಬಂತಾಗಿದ್ದು ಬಿಜೆಪಿ ಒಡೆದ ಮನೆಯಾಗಿದೆ.
ಇಂದು ಮೈಸೂರಿನಲ್ಲಿ ಸಭೆ ನಡೆಸಿದ ವಿಜಯೇಂದ್ರ ಬಣದ ಬಿಜೆಪಿ ನಾಯಕರು ಯತ್ನಾಳ್ ವಿರುದ್ಧ ಹರಿಹಾಯ್ದಿದ್ದಾರೆ. ಸಭೆ ಬಳಿಕ ಮಾತನಾಡಿದ ಮಾಜಿ ಸಚಿವ ಬಿ ಸಿ ಪಾಟೀಲ್, ಯತ್ನಾಳ್ ಹಾಗೂ ವಿಜಯೇಂದ್ರ ನಡುವೆ ವಾಕ್ಸಮರ ಉಂಟಾಗಿದೆ.
ಯತ್ನಾಳ್ ಕೇಂದ್ರದಲ್ಲಿ ಮಂತ್ರಿಯಾಗಿದ್ದವರು. ಹೈಕಮಾಂಡ್ ಜೊತೆ ಇದರ ಬಗ್ಗೆ ಮಾತನಾಡಬೇಕು. ಹಾದಿ ಬೀದಿಯಲ್ಲಿ ಚರ್ಚೆ ಮಾಡಬಾರದು. ಯತ್ನಾಳ್ ಗೆ ಪ್ರಚಾರದ ಹುಚ್ಚು ಹಿಡಿದಿದ್ದು, ಯಡಿಯೂರಪ್ಪ, ವಿಜಯೇಂದ್ರರನ್ನು ಬೈಯುವ ಕೆಲಸ ಮಾಡ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ರು.
ಯಡಿಯೂರಪ್ಪ ವಿರುದ್ಧ ಮಾತನಾಡಿದರೆ ಅವರು ವೃದ್ಧಿ ಆಗೋದಿಲ್ಲ. ಯತ್ನಾಳ್ ಬಾಯಿ ಮುಚ್ಚಿಸಿ ಎಂದು ಸಾಕಷ್ಟು ಕಾರ್ಯಕರ್ತರು ಮನವಿ ಮಾಡ್ತಿದ್ದಾರೆ. ಪಕ್ಷದ ಬಗ್ಗೆ ಕಿಂಚಿತ್ತೂ ಕಾಳಜಿ ಅವರಿಗಿಲ್ಲ. ನಾವು ಮುಡಾ ಹಗರಣದ ವಿರುದ್ಧ ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ಮಾಡಿದ್ವಿ, ಆಗಲೂ ಅವರು ಬರಲಿಲ್ಲ.
ಈಗ ವಕ್ಫ್ ವಿರುದ್ದ ಹೋರಾಟ ಮಾಡ್ತಿದ್ದಾರೆ ಸಂತೋಷ. ಬಿಜೆಪಿ ವತಿಯಿಂದ ಮೂರು ತಂಡ ಮಾಡಿ ಅವರನ್ನು ನೇಮಕ ಮಾಡಿತ್ತು. ಇಲ್ಲಿ ಭಾಗಿಯಾದರೆ ಹೆಚ್ಚಿನ ಪ್ರಚಾರ ಸಿಗೋದಿಲ್ಲ ಎಂದು ವೈಯುಕ್ತಿಕವಾಗಿ ಮಾಡಲು ಮುಂದಾಗಿದ್ದಾರೆ ಎಂದು ಕಿಡಿ ಕಾರಿದ್ರು