ಐಪಿಎಲ್ ಮಾಜಿ ಆಟಗಾರನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲು
ಜೋಧ್ಪುರ: ಇಂಡಿಯನ್ ಪ್ರೀಮಿಯರ್ ಲೀಗ್ನ(ಐಪಿಎಲ್) ಮಾಜಿ ಆಟಗಾರ ಹಾಗೂ ಮುಂಬೈ ಇಂಡಿಯನ್ಸ್ ತಂಡದ ಆಲ್ರೌಂಡರ್ ಶಿವಾಲಿಕ್ ಶರ್ಮಾ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದೆ. ದೂರು ದಾಖಲಾಗಿ ಹಲವು ದಿನಗಳಾಗಿದ್ದು, ಇದೀಗ ಪ್ರಕರಣ ಬೆಳಕಿಗೆ ಬಂದಿದೆ.
ಶಿವಾಲಿಕ್ ಶರ್ಮಾ ಮದುವೆಯ ನೆಪದಲ್ಲಿ ತನ್ನೊಂದಿಗೆ ಬಲವಂತವಾಗಿ ದೈಹಿಕ ಸಂಬಂಧ ಬೆಳೆಸಿದ್ದು, ಇದೀಗ ಮದುವೆಯಾಗಲು ನಿರಾಕರಿಸಿದ್ದಾರೆ ಎಂದು ಆರೋಪಿಸಿ ಸಂತ್ರಸ್ತೆ ಜೋಧ್ಪುರ ಜಿಲ್ಲೆಯ ಕುಡಿ ಭಗತ್ಸುನಿ ಹೌಸಿಂಗ್ ಬೋರ್ಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನನ್ವಯ ಅತ್ಯಾಚಾರ ಪ್ರಕರಣ ದಾಖಲಾಗಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಆರೋಪಿಯನ್ನು ಬಂಧಿಸಲು ತಂಡ ರಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
”ಮಾಜಿ ಕ್ರಿಕೆಟಿಗ ಶಿವಾಲಿಕ್ ಶರ್ಮಾ ಮದುವೆಯ ನೆಪದಲ್ಲಿ ನಿಶ್ಚಿತಾರ್ಥ ಮಾಡಿಕೊಂಡು ಯುವತಿಯ ಜೊತೆ ದೈಹಿಕ ಸಂಬಂಧ ಬೆಳೆಸಿರುವ ಆರೋಪ ಎದುರಿಸುತ್ತಿದ್ದಾರೆ. ಆತನ ವಿರುದ್ಧ ಕುಡಿ ಭಗತ್ಸುನಿ ಹೌಸಿಂಗ್ ಬೋರ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಂತ್ರಸ್ತೆಯ ವೈದ್ಯಕೀಯ ಪರೀಕ್ಷೆ ಮತ್ತು ನ್ಯಾಯಾಲಯದಲ್ಲಿ ಆಕೆಯ ಹೇಳಿಕೆ ಸೇರಿದಂತೆ ಇತರ ಪ್ರಕ್ರಿಯೆಗಳು ಪೂರ್ಣಗೊಂಡಿವೆ. ಆರೋಪಿಗಾಗಿ ಶೋಧ ನಡೆಸಲಾಗುತ್ತಿದೆ” ಎಂದು ಎಸಿಪಿ ಆನಂದ್ ಸಿಂಗ್ ಮಾಹಿತಿ ನೀಡಿದ್ದಾರೆ.
”ಫೆಬ್ರವರಿ 2023ರಲ್ಲಿ ನಾನು ಗುಜರಾತ್ನ ವಡೋದರಾಕ್ಕೆ ಭೇಟಿ ನೀಡಿದಾಗ ಶಿವಾಲಿಕ್ ಶರ್ಮಾ ಅವರನ್ನು ಸಂಪರ್ಕಿಸಿದ್ದು, ಅಲ್ಲಿಂದ ಇಬ್ಬರೂ ಸ್ನೇಹಿತರಾದೆವು. ಫೋನ್ನಲ್ಲಿ ಮಾತನಾಡುತ್ತಿದ್ದಂತೆ ನಮ್ಮಿಬ್ಬರಲ್ಲಿ ಆಪ್ತತೆ ಹೆಚ್ಚಾಯಿತು. ಇದಾದ ನಂತರ, ನಮ್ಮಿಬ್ಬರ ಪೋಷಕರು ಪರಸ್ಪರ ಭೇಟಿಯಾದರು. ಶಿವಾಲಿಕ್ ಅವರ ಪೋಷಕರು ಆಗಸ್ಟ್ 2023ರಲ್ಲಿ ಜೋಧ್ಪುರಕ್ಕೆ ಬಂದಿದ್ದರು. ಇದಾದ ನಂತರ, ಇಬ್ಬರ ಒಪ್ಪಿಗೆಯೊಂದಿಗೆ ನಿಶ್ಚಿತಾರ್ಥ ಕೂಡ ನಡೆಯಿತು. ನಿಶ್ಚಿತಾರ್ಥದ ನಂತರ, ಶಿವಾಲಿಕ್ ಜೋಧ್ಪುರಕ್ಕೆ ಹಿಂತಿರುಗುವ ಮುನ್ನ ತನ್ನೊಂದಿಗೆ ದೈಹಿಕ ಸಂಬಂಧ ಬೆಳೆಸಿದರು. ಬಳಿಕ ಇಬ್ಬರೂ ರಾಜಸ್ಥಾನದ ಅನೇಕ ಸ್ಥಳಗಳಿಗೆ ಭೇಟಿ ನೀಡಿದೆವು. ಆಗಸ್ಟ್ 2024ರಲ್ಲಿ ತನ್ನನ್ನು ವಡೋದರಾಕ್ಕೆ ಕರೆಸಿಕೊಂಡಾಗ ಭವಿಷ್ಯದ ದೃಷ್ಟಿಯಿಂದ ಈ ಸಂಬಂಧ ಮುಂದುವರಿಯಲು ಸಾಧ್ಯವಿಲ್ಲ ಅಂತ ಹೇಳಿ ದೂರವಾಗಿದ್ದಾರೆ. ಮದುವೆ ನೆಪದಲ್ಲಿ ನಿಶ್ಚಿತಾರ್ಥಕ್ಕೂ ಮುನ್ನ ತನ್ನೊಂದಿಗೆ ಬಲವಂತವಾಗಿ ದೈಹಿಕ ಸಂಬಂಧ ಹೊಂದಿದ್ದ ಅವರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಯುವತಿ ದೂರಿನಲ್ಲಿ ಒತ್ತಾಯಿಸಿದ್ದಾರೆ” ಎಂದು ಪೊಲೀಸರು ತಿಳಿಸಿದ್ದಾರೆ.
ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಲಾಗಿದೆ. ಶಿವಾಲಿಕ್ ಶರ್ಮಾ ವಡೋದರಾದ ನಿವಾಸಿ ಎಂಬುದು ಗೊತ್ತಾಗಿದೆ. 2024ರಲ್ಲಿ ಮುಂಬೈ ಇಂಡಿಯನ್ಸ್ ತಂಡದಲ್ಲಿ ಆಲ್ ರೌಂಡರ್ ಆಗಿ ಗುರುತಿಸಿಕೊಂಡಿದ್ದರು. ಅದಕ್ಕೂ ಮುನ್ನ ರಣಜಿ ಟ್ರೋಫಿಯಲ್ಲಿ ವಡೋದರಾ ಪರ ಕೂಡ ಆಡಿದ್ದು, ಸದ್ಯ ಕ್ರಿಕೆಟ್ ಚಟುವಟಿಕೆಗಳಿಂದ ದೂರವಿದ್ದಾರೆ.




