ಬಳ್ಳಾರಿ : ನರೇಂದ್ರ ಮೋದಿ ಅವರು ಪ್ರಧಾನಿಯಾಗುವುದಕ್ಕೂ ಮೊದಲು ಭಾರತ ಭಿಕ್ಷುಕರ ದೇಶ ಆಗಿತ್ತು ಎಂದು ಮಾಜಿ ಸಚಿವ ಶ್ರೀರಾಮುಲು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಮೋದಿ ಸರ್ಕಾರ 11 ವರ್ಷ ಪೂರೈಸಿದ್ದಕ್ಕೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀರಾಮುಲು, ‘ನರೇಂದ್ರ ಮೋದಿ ಬರೋದಕ್ಕೂ ಮೊದಲು ಭಾರತವನ್ನು ಭಿಕ್ಷುಕರ ದೇಶ, ಹಾವಾಡಿಗರ ದೇಶ ಎಂದು ಕರೆಯುತ್ತಿದ್ದರು.ಈಗ ಕಾಲ ಬದಲಾಗಿದೆ, ಇದೀಗ ಭಾರತವನ್ನು ವಿಶ್ವವೇ ನೋಡುವಂತೆ ಮಾಡಿದ್ದಾರೆ’ ಎಂದಿದ್ದಾರೆ.
‘ನೆಹರು ಕಾಲದಲ್ಲಿ ವೈಯಕ್ತಿಕ ಹಿತಾಸಕ್ತಿಗೆ ಕೆಲಸ ಮಾಡಿದ್ದರು. ದೇಶದ ಅಭಿವೃದ್ಧಿ ಬಗ್ಗೆ ನೆಹರು ಕುಟುಂಬ ಚಿಂತನೆ ಮಾಡಲಿಲ್ಲ. ತಾವು ಅಭಿವೃದ್ಧಿ ಹೊಂದಿದ್ದರೇ ಹೊರತು ದೇಶ ಅಭಿವೃದ್ಧಿ ಮಾಡಲಿಲ್ಲ. ಚೀನಾ-ಭಾರತದ ಯುದ್ಧದಲ್ಲಿ ಭಾರತ ಮಂಡಿಯೂರಿತು. ನೆಹರು ಕಾಲಘಟ್ಟ ಕೆಟ್ಟದಾಗಿತ್ತು, ಸಾವಿರಾರು ಸೈನಿಕರು ಹುತಾತ್ಮರಾದರು ಎಂದು ಕಿಡಿಕಾರಿದ್ದಾರೆ.
ಇಂದಿರಾಗಾಂಧಿ ಸರ್ವಾಧಿಕಾರಿ ಧೋರಣೆಯಿಂದ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ್ದರು. ಕಮಿಷನ್ ಮಧ್ಯವರ್ತಿಗಳನ್ನು ಬೆಳೆಸೋದೇ ಗಾಂಧಿ ಕುಟುಂಬದ ಕೆಲಸ. ಅವರು ಇನ್ನೂ ಬೋಫೋರ್ಸ್ ಹಗರಣದಲ್ಲಿ ಮುಕ್ತರಾಗಿಲ್ಲ.
ರಾಹುಲ್ ಸೋನಿಯಾ ಕೂಡ ನ್ಯಾಷನಲ್ ಹೆರಾಲ್ಡ್ ಕೇಸ್‌ನಲ್ಲಿ ಜೈಲಿಗೆ ಹೋಗುತ್ತಾರೆ. ನ್ಯಾಷನಲ್ ಹೆರಾಲ್ಡ್ ದೊಡ್ಡ ಗೋಲ್‌ಮಾಲ್, ಆ ಪ್ರಕರಣದಲ್ಲಿ ಕರ್ನಾಟಕದ ನಾಯಕರು ಇದ್ದಾರೆ ಎಂದು ರಾಮುಲು ಆರೋಪಿಸಿದ್ದಾರೆ.
ವಿಶ್ವದಲ್ಲಿ ಭಾರತಕ್ಕೆ ಗೌರವ ಸಿಗುವಂತೆ ಮಾಡಿದ್ದು ಮೋದಿ. 60 ವರ್ಷದ ಕಾಂಗ್ರೆಸ್ ಆಳ್ವಿಕೆಯಲ್ಲಿ ಭಾರತ ದುರ್ಬಲ ದೇಶವಾಗಿತ್ತು. ಯುಪಿಎ ಆಳ್ವಿಕೆಯಲ್ಲಿ ದೇಶದಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿತ್ತು ಎಂದು ಹರಿಹಾಯ್ದ ಅವರು, ಕಳೆದ 70 ವರ್ಷದಲ್ಲಿ ಮಾಡದೇ ಇರೋ ಸಾಧನೆ ಕಳೆದ ಹತ್ತು ವರ್ಷದಲ್ಲಿ ಮೋದಿ ಮಾಡಿದ್ದಾರೆ.
ಕಿಸಾನ್ ಸನ್ಮಾನ್ ಯೋಜನೆಯಡಿ ರೈತರಿಗೆ ಆರು ಸಾವಿರ ಹಣ ನೀಡಲಾಗುತ್ತಿದೆ, ಆದರೆ ರಾಜ್ಯ ಸರ್ಕಾರ ನಾಲ್ಕು ಸಾವಿರ ಹಣ ನೀಡುತ್ತಿಲ್ಲ. ಪಹಲ್ಗಾಮ್ ದಾಳಿ ಬಳಿಕ ಉಗ್ರರ ತಾಣ ನಾಶ ಮಾಡಲಾಗಿದೆ.
ಮೋದಿ ನೇತೃತ್ವದ ದೇಶದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಲಾಗಿದೆ. ನೆಹರು ಪ್ರಧಾನಿ ಆಗಿದ್ದಾಗ ಭಾರತವನ್ನು ಭಿಕ್ಷುಕರ ದೇಶ ಎಂದು ಹೇಳುತ್ತಿದ್ದರು. ಆದರೆ ಈ ಮಾತು ಹೇಳಿದ್ದು ನಾನಲ್ಲ, ಹಳ್ಳಿಯಲ್ಲಿ ಜನ ಹೇಳುತ್ತಿದ್ದರು. ಇವತ್ತು ಜಿಡಿಪಿಯಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ.
ವಾಜಪೇಯಿ ಕಾಲದಲ್ಲಿಯೂ ಭಾರತ ಅಭಿವೃದ್ಧಿ ಹೊಂದಿತ್ತು. ಟ್ರಂಪ್ ಹೇಳಿಕೆಯಿಂದ ಯುದ್ಧ ನಿಲ್ಲಿಸಿಲ್ಲ, ಅವರ ಹೇಳಿಕೆಗೂ ನಮಗೂ ಸಂಬಂಧವಿಲ್ಲ ಎಂದು ಶ್ರೀರಾಮುಲು ಹೇಳಿದ್ದಾ ರೆ.




