ಅಲಿಗಢ: ಮಗಳ ಮದುವೆಗೂ ಮುನ್ನ ಆಭರಣಗಳನ್ನು ದೋಚಿಕೊಂಡು ಭಾವಿ ಅಳಿಯನ ಜತೆ ಅತ್ತೆ ಪರಾರಿಯಾಗಿರುವ ವಿಚಿತ್ರ ಘಟನೆಯೊಂದು ಉತ್ತರ ಪ್ರದೇಶ ಅಲಿಗಢದಲ್ಲಿ ನಡೆದಿದೆ. ಮಗಳ ಮದುವೆಗೆ ಕೇವಲ 9 ದಿನಗಳಿತ್ತು, ನಿಶ್ಚಿತಾರ್ಥವೂ ನಡೆದುಹೋಗಿತ್ತು. ಈ ಸಂದರ್ಭದಲ್ಲಿ ಮನೆಯಲ್ಲಿರುವ ಆಭರಣಗಳನ್ನೆತ್ತಿಕೊಂಡು ಮಹಿಳೆ ಪರಾರಿಯಾಗಿದ್ದಾಳೆ.
ಭಾವಿ ಅಳಿಯ ಅತ್ತೆಯನ್ನು ಪ್ರೀತಿಸುತ್ತಿದ್ದ, ಮತ್ತು ಆ ಜೋಡಿ ಓಡಿ ಹೋಗಲು ನಿರ್ಧರಿಸಿತ್ತು. ಓಡಿಹೋಗುವ ಮೊದಲು, ಮಹಿಳೆ ತನ್ನ ಮಗಳ ಮದುವೆಗಾಗಿ ಮಾಡಿದ್ದ ಆಭರಣ ಹಾಗೂ ಹಣವನ್ನು ತೆಗೆದುಕೊಂಡು ಹೋಗಿದ್ದಾಳೆ, ಕುಟುಂಬವು ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದೆ. ಆ ಮಹಿಳೆಯೇ ಮಗಳಿಗೆ ಆತನೊಂದಿಗೆ ನಿಶ್ಚಿತಾರ್ಥ ನೆರವೇರಿಸಿದ್ದಳು, ಹುಡುಗನನ್ನು ಆಕೆಯೇ ಹುಡುಕಿದ್ದಳು. ಮದುವೆಯ ಸಿದ್ಧತೆಗಳ ನೆಪದಲ್ಲಿ ವರನು ಆಗಾಗ್ಗೆ ಅವರ ಮನೆಗೆ ಭೇಟಿ ನೀಡುತ್ತಿದ್ದ. ಕುಟುಂಬಕ್ಕೆ ತಿಳಿಯದಂತೆ, ಅಳಿಯ ಮತ್ತು ಅತ್ತೆಯ ನಡುವೆ ಸಂಬಂಧ ಬೆಳೆಯುತ್ತಿತ್ತು. ವರನು ತನ್ನ ಭಾವಿ ಅತ್ತೆಗೆ ಮೊಬೈಲ್ ಫೋನ್ ಅನ್ನು ಉಡುಗೊರೆಯಾಗಿ ನೀಡಿದ್ದ, ಅದನ್ನುಯಾರೂ ಅಷ್ಟು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ.
ಏಪ್ರಿಲ್ 16 ರಂದು ಮದುವೆ ನಿಗದಿಯಾಗಿತ್ತು, ಮತ್ತು ಆಮಂತ್ರಣ ಪತ್ರಿಕೆಗಳನ್ನು ವಿತರಿಸಲಾಗಿತ್ತು. ಆದರೆ, ವರ ಮತ್ತು ಅತ್ತೆ ಶಾಪಿಂಗ್ ನೆಪದಲ್ಲಿ ಒಟ್ಟಿಗೆ ಮನೆಯಿಂದ ಹೊರಟುಹೋದವರು ಹಿಂದಿರುಗಿ ಬರಲಿಲ್ಲ. ಎಲ್ಲಿದ್ದಾರೆ ಎಂಬುದೂ ಯಾರಿಗೂ ತಿಳಿದಿಲ್ಲ.
ಹುಡುಗಿಯ ತಂದೆಗೆ ಅನುಮಾನ ಬಂದಾಗ, ಅವರು ಬೀರು ಪರಿಶೀಲಿಸಿದಾಗ ಮದುವೆಯ ಆಭರಣಗಳು ಮತ್ತು ನಗದು ಕಾಣೆಯಾಗಿರುವುದು ಕಂಡುಬಂದಿದೆ, ಇದು ಅವರ ಭಯ ಮತ್ತಷ್ಟು ಗಾಢವಾಗಿತ್ತು, ಪೊಲೀಸರು ಈಗ ಇಬ್ಬರನ್ನು ಹುಡುಕುತ್ತಿದ್ದಾರೆ ಮತ್ತು ಅವರ ಮೊಬೈಲ್ ಲೊಕೇಷನ್ ಆಧರಿಸಿ ಸ್ಥಳಗಳನ್ನು ಪರಿಶೀಲಿಸುತ್ತಿದ್ದಾರೆ.