ಬೆಳಗಾವಿ: ರಾಜ್ಯದಲ್ಲಿ ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ ಸರಣಿ ಸಾವು ಪ್ರಕರಣ ಬೆಳಕಿಗೆ ಬಂದ ಬಳಿಕ ರಾಜ್ಯದ ಹಲವೆಡೆ ನಿರಂತರವಾಗಿ ಪ್ರಕರಣಗಳು ವರದಿಯಾಗುತ್ತಿವೆ. ಇದೀಗ ನಗರದ ಬಿಮ್ಸ್ ಆಸ್ಪತ್ರೆಯಲ್ಲಿ ಮತ್ತೋರ್ವ ಬಾಣಂತಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಬೆಳಗಾವಿ ತಾಲೂಕಿನ ನಿಲಜಿ ಗ್ರಾಮದ ಅಂಜಲಿ ಪಾಟೀಲ(32) ಮೃತ ಬಾಣಂತಿ ಆಗಿದ್ದು,ವೈದ್ಯರು ಜನವರಿ 22ರಂದು ಹೆರಿಗೆಗೆ ದಿನಾಂಕ ನೀಡಿದ್ದರು.
ಹೆರಿಗೆ ನೋವು ಕಾಣಿಸದ ಹಿನ್ನೆಲೆಯಲ್ಲಿ ಅಂಜಲಿ ಅವರನ್ನು ಸೋಮವಾರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸಿಸೇರಿಯನ್ ಮೂಲಕ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಹೆಣ್ಣು ಮಗುವಿಗೆ ಜನ್ಮ ನೀಡಿದ್ದ ಬಾಣಂತಿ ಹೆರಿಗೆ ವಾರ್ಡ್ ನಲ್ಲಿ ಮೃತಪಟ್ಟಿದ್ದಾಳೆ.
ಹೆಣ್ಣು ಮಗು ಆರೋಗ್ಯವಾಗಿದೆ. ವೈದ್ಯರ ನಿರ್ಲಕ್ಷ್ಯದಿಂದಲೇ ಈ ಸಾವು ಸಂಭವಿಸಿದೆ’ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಅಂಜಲಿ ಸಾವಿನಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಬಿಮ್ಸ್ ಆವರಣದಲ್ಲಿ ಕುಟುಂಬಸ್ಥರು ಹಾಗೂ ಸಂಬಂಧಿಕರು ಜಮಾಯಿಸಿದ್ದಾರೆ.