—————————-ಶಾಸಕ ಟಿಎ ಶರವಣ ಸೇರಿ 9 ಸದಸ್ಯರ ಸಮಿತಿ ರಚಿಸಿದ ಜೆಡಿಎಸ್
ಬೆಂಗಳೂರು: ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ನೂತನವಾಗಿ ರಚಿಸಲಾಗಿರುವ ಐದು ನಗರ ಪಾಲಿಕೆಗಳ ಮುಂಬರುವ ಚುನಾವಣೆಗಳ ಸಿದ್ಧತೆಗಾಗಿ ಜೆಡಿಎಸ್ ಪಕ್ಷವು ಉನ್ನತ ಮಟ್ಟದ ಉಸ್ತುವಾರಿ ಸಮಿತಿ ರಚಿಸಿದೆ. ಪಕ್ಷದ ರಾಜ್ಯಾಧ್ಯಕ್ಷ ಹಾಗೂ ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಅಧಿಕೃತ ನೇಮಕಾತಿ ಆದೇಶ ಹೊರಡಿಸಿದ್ದಾರೆ.
ವಿಧಾನ ಪರಿಷತ್ ಶಾಸಕ ಟಿ.ಎ. ಶರವಣ ಅವರು ಸೇರಿದಂತೆ ಒಟ್ಟು ಒಂಬತ್ತು ಮಂದಿ ಹಿರಿಯ ಮುಖಂಡರು ಸಮಿತಿಗೆ ನೇಮಿಸಲಾಗಿದೆ. ಫೆಬ್ರವರಿ-ಮಾರ್ಚ್ 2026 ರಲ್ಲಿ ಈ ನಗರ ಪಾಲಿಕೆಗಳಿಗೆ ಚುನಾವಣೆ ನಡೆಯುವ ಸಂಭವವಿರುವ ಹಿನ್ನೆಲೆಯಲ್ಲಿ ಪಕ್ಷದ ಸಂಘಟನೆ ಮತ್ತು ಬಲವರ್ಧನೆಗೆ ಒತ್ತು ನೀಡಲು ಈ ನಿರ್ಧಾರ ಕೈಗೊಳ್ಳಲಾಗಿದೆ.
ಉಸ್ತುವಾರಿ ಸಮಿತಿಯ ಪ್ರಮುಖ ಸದಸ್ಯರು:
ಎ. ಮಂಜು, ಶಾಸಕ ಅರಕಲಗೂಡು ಕ್ಷೇತ್ರ,
ಎಂ.ಟಿ. ಕೃಷ್ಣಪ್ಪ, ಶಾಸಕ ತುರುವೇಕೆರೆ ಕ್ಷೇತ್ರ,
ಟಿ.ಎ. ಶರವಣ, ವಿಧಾನ ಪರಿಷತ್ ಸದಸ್ಯ ಬೆಂಗಳೂರು,
ಟಿ.ಎನ್. ಜವರಾಯಿಗೌಡ ವಿಧಾನ ಪರಿಷತ್ ಸದಸ್ಯ ಬೆಂಗಳೂರು,
ನಿಖಿಲ್ ಕುಮಾರಸ್ವಾಮಿ, ರಾಜ್ಯಾಧ್ಯಕ್ಷ ಯುವ ಜನತಾದಳ,
ಎಂ. ಕೃಷ್ಣಾರೆಡ್ಡಿ, ಮಾಜಿ ಉಪಸಭಾಧ್ಯಕ್ಷ ವಿಧಾನಸಭೆ,
ಸುರೇಶ್‌ಗೌಡ, ಮಾಜಿ ಶಾಸಕ ನಾಗಮಂಗಲ ಕ್ಷೇತ್ರ,
ಎ. ಮಂಜುನಾಥ್, ಮಾಜಿ ಶಾಸಕ ಮಾಗಡಿ ಕ್ಷೇತ್ರ,
ಕೆ.ಎ. ತಿಪ್ಪೇಸ್ವಾಮಿ, ಮಾಜಿ ಶಾಸಕ ಬೆಂಗಳೂರು,
ಉಸ್ತುವಾರಿ ಸಮಿತಿಯ ಪ್ರಮುಖ ಐದು (5) ಕಾರ್ಯಗಳು,
ವಾರ್ಡ್‌ವಾರು ಉಸ್ತುವಾರಿ ಸಮಿತಿಗಳ ರಚನೆ: ಹೊಸದಾಗಿ ರಚಿಸಿದ ಐದು ನಗರ ಪಾಲಿಕೆಗಳಲ್ಲಿ (ಬೆಂಗಳೂರು ಕೇಂದ್ರ, ಪಶ್ಚಿಮ, ದಕ್ಷಿಣ, ಪೂರ್ವ ಮತ್ತು ಉತ್ತರ) ವಾರ್ಡ್‌ವಾರು ಪಕ್ಷದ ಸಂಘಟನೆ ಹಾಗೂ ಬಲವರ್ಧನೆಗೆ ಪಕ್ಷದ ಮುಖಂಡರು, ಮಾಜಿ ನಗರ ಪಾಲಿಕೆ ಸದಸ್ಯರು ಮತ್ತು ಹಿಂದಿನ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿಗಳನ್ನು ಒಳಗೊಂಡ ಉಸ್ತುವಾರಿ ಸಮಿತಿ ರಚಿಸುವುದು.
ಸದಸ್ಯತ್ವ ನೋಂದಣಿ ಅಭಿಯಾನ: ಪಾಲಿಕೆವಾರು ಪಕ್ಷದ ಸದಸ್ಯತ್ವ ನೋಂದಣಿ ಅಭಿಯಾನ ಕಾರ್ಯಕ್ರಮವನ್ನು ರೂಪಿಸಿ, ವಾರ್ಡ್‌ವಾರು ಮತ್ತು ವಿಧಾನಸಭಾ ಕ್ಷೇತ್ರವಾರು ಕಾರ್ಯಕರ್ತರು ಹಾಗೂ ಮುಖಂಡರ ಸಭೆಗಳನ್ನು ಆಯೋಜಿಸುವುದು.
ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ: ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸಲು ಇಚ್ಛಿಸುವ ಆಕಾಂಕ್ಷಿಗಳ ಸಾಮರ್ಥ್ಯವನ್ನು ಆಧರಿಸಿ, ವಾರ್ಡ್‌ವಾರು ಪಕ್ಷದ ಸಂಭವನೀಯ ಅಭ್ಯರ್ಥಿಗಳ ಪಟ್ಟಿಯನ್ನು ತಯಾರಿಸಿ ಪಕ್ಷದ ರಾಜ್ಯ ಕಚೇರಿಗೆ ಸಲ್ಲಿಸುವುದು.
ಎನ್.ಡಿ.ಎ. ಮೈತ್ರಿಕೂಟದೊಂದಿಗೆ ಸಮನ್ವಯ: ಮುಂಬರುವ ನಗರ ಪಾಲಿಕೆ ಚುನಾವಣೆಯಲ್ಲಿ ಎನ್.ಡಿ.ಎ. ಮೈತ್ರಿಕೂಟದ ಪಕ್ಷಗಳೊಂದಿಗೆ ಸಮನ್ವಯ ಮತ್ತು ಚುನಾವಣಾ ಹೊಂದಾಣಿಕೆ ಬಗ್ಗೆ ರೂಪುರೇಷೆಗಳನ್ನು ಸಿದ್ಧಪಡಿಸಿ, ರಾಜ್ಯ ಕಚೇರಿಗೆ ಸಲ್ಲಿಸುವುದು.
ಕಾರ್ಯಗಳ ವಿಮರ್ಶೆ: ರಚಿಸಲಾದ ಉಪ-ಸಮಿತಿಗಳ ಕಾರ್ಯಗಳನ್ನು ಕಾಲಕಾಲಕ್ಕೆ ವಿಮರ್ಶಿಸುವುದು.
ಅಕ್ಟೋಬರ್ 16ರಂದು ನಡೆದಿದ್ದ ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ತೆಗೆದುಕೊಂಡ ನಿರ್ಣಯದಂತೆ ಈ ಸಮಿತಿಯನ್ನು ರಚಿಸಲಾಗಿದೆ ಎಂದು ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ: ಅಯ್ಯಣ್ಣ ಮಾಸ್ಟರ್




