Ad imageAd image

ಜನಪದ ಕನ್ನಡ ಸಾಹಿತ್ಯದ ತಾಯಿ ಬೇರು ಪ್ರೊ ಟಿ ಎಸ್ ವಂಟಗೂಡಿ.

Bharath Vaibhav
ಜನಪದ ಕನ್ನಡ ಸಾಹಿತ್ಯದ ತಾಯಿ ಬೇರು ಪ್ರೊ ಟಿ ಎಸ್ ವಂಟಗೂಡಿ.
WhatsApp Group Join Now
Telegram Group Join Now

ಚಿಕ್ಕೋಡಿ:-  ಕನ್ನಡ ಸಾಹಿತ್ಯಕ್ಕೆ ಹೊಸ ಶಕ್ತಿ ತುಂಬಿದ್ದು ಜನಪದ ಇಂದು ನಮ್ಮ ಕನ್ನಡ ಸಾಹಿತ್ಯದಲ್ಲಿ ಸೊಗಸು, ಸೌಂದರ್ಯ ಶ್ರೀಮಂತಿಕೆ  ತುಂಬಿಕೊಂಡಿದೆ ಎಂದರೆ ಅದಕ್ಕೆ ಮೂಲ ಜನಪದ ಸಾಹಿತ್ಯವೇ ಕಾರಣ.ಹಾಗಾಗಿ ಜನಪದ ಕನ್ನಡ ಸಾಹಿತ್ಯದ ಮೂಲ ತಾಯಿ ಬೇರು ಎಂದು ಹಿಡಕಲ್ ಗ್ರಾಮದ ವಸಂತರಾವ ಪಾಟೀಲ್ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೊ ಟಿ ಎಸ್ ವಂಟಗೂಡಿ ಅಭಿಮತ ವ್ಯಕ್ತಪಡಿಸಿದರು.ಅವರು ಸಮೀಪದ ಕೆ ಎಲ್ ಇ ಸಂಸ್ಥೆಯ  ವಾಣಿಜ್ಯ ಪದವಿ ಮಹಾವಿದ್ಯಾಲಯ ಶಿರಗುಪ್ಪಿಯ ಎನ್ಎಸ್ಎಸ್ ಘಟಕದವರು ದತ್ತು ಗ್ರಾಮ ಇಂಗಳಿಯಲ್ಲಿ ಹಮ್ಮಿಕೊಂಡ  ಎರಡನೇ ದಿನದ ವಿಶೇಷ ಶಿಬಿರದಲ್ಲಿ “ಜನಪದ ಸಾಹಿತ್ಯ ಮತ್ತು ಸಂಸ್ಕೃತಿ” ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಉಪನ್ಯಾಸ ನೀಡಿದರು.

 

ಜನಪದ ಎಂಬುದು ವಿದ್ವಾಂಸರ ಪೆನ್ನಿನಿಂದ ಬಂದ ಸಾಹಿತ್ಯವಲ್ಲ, ಮಣ್ಣಿನಲ್ಲಿ ಬೆವರು ಕಲಿಸಿ ದುಡಿಯುವವರ ಬೆನ್ನಿನ ಬೆವರಿನ ಸಾಹಿತ್ಯವೇ  ಜನಪದ ಎಂದು ಮಾರ್ಮಿಕವಾಗಿ ವ್ಯಾಖ್ಯಾನಿಸಿದರು. ವಿಶ್ವ ಸಾಹಿತ್ಯಕ್ಕೆ ಜನಪದ ಸಾಹಿತ್ಯದ ಕೊಡುಗೆ ಅತ್ಯಂತ ಅಪಾರವಾದದ್ದು. ಜನಪದರ ಪಟ್ಟ ಪಾಡೆಲ್ಲವೂ  ಹಾಡಾಯಿತು.

ಆಧುನಿಕ ಕನ್ನಡ ಕವಿಗಳಿಗೆ ಮೂಲ ದಿವ್ಯ ಪ್ರೇರಣೆಯಾದ ಜನಪದ ಸಾಹಿತ್ಯದ ಹರವು ಅತ್ಯಂತ ವಿಶಾಲವಾದದ್ದು ಆಳವಾದದ್ದು. ಗಾದೆ ಒಗಟು ಒಡಪು ಕೋಲಾಟ ಗೀಗಿ ಪದ ಹಂತಿ ಪದ ಭಜನಾಪದ ಸೋಬಾನೆ ಪದಗಳಲ್ಲಿ ಹುದುಗಿಕೊಂಡ ಸತ್ವಯುತ ಈ ಜನಪದ ಸಾಹಿತ್ಯ ಅತ್ಯಂತ ಮೌಲಿಕವಾದದ್ದು. ಜನಪದ ಸಾಹಿತ್ಯ ಕಾಸಿ ಆರಿಸಿದ ಹಾಲು ಇದ್ದಾಂಗ ಎಂದು ಸೊಗಸಾಗಿ ವಿಶ್ಲೇಷಿಸಿದರು. ಜನಪದರು ಯಾವುದೇ ಶಾಲೆ ಕಾಲೇಜಿಗೆ ಹೋಗದೆ ಮೂರು ಸಾಲುಗಳಲ್ಲಿ ಮೂರು ಲೋಕದ ಅನುಭವಗಳನ್ನ ಅತ್ಯಂತ ಚೆನ್ನಾಗಿ ಅನಾವರಣಗೊಳಿಸಿದ್ದು ಗಮನಾರ್ಹ ಸಂಗತಿ ಎಂದರು.

ಜನಪದ ಸಾಹಿತ್ಯದಲ್ಲಿ ಅಡಗಿಕೊಂಡ ನೈಜ ಅರ್ಥ ಚಮತ್ಕಾರ ನಿಜಕ್ಕೂ ಬೆರಗುಗೊಳಿಸುವಂತದ್ದು.  ಸಾಂದರ್ಭಿಕವಾಗಿ ಕೆಲವು ಜನಪದ ತ್ರಿಪದಿಗಳನ್ನು  ವಂಟಗೂಡಿ ಅವರು ಸುಶ್ರಾವ್ಯವಾಗಿ ಹಾಡಿ ಮನಸೂರೆಗೊಂಡರು.ಇದಕ್ಕೂ ಮೊದಲು ಆಗಮಿಸಿದ ಗಣ್ಯರು ಜ್ಯೋತಿ ಪ್ರಜ್ವಲನಗೊಳಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.  ಸಾಂದರ್ಭಿಕವಾಗಿ  ಕು. ಪ್ರಿಯಂಕಾ ಡಂಗ್ ಹಾಗೂ ಸಂಗಡಿಗರು ಸಾಮೂಹಿಕ ಜನಪದ ಗೀತೆಗೆ ಕಂಠ ದಾನ ಮಾಡಿದರು. ಘನ ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಕನ್ನಡ ಪ್ರಾಧ್ಯಾಪಕರು, ಸಾಹಿತಿ  ಡಾ ಜಯವೀರ ಎ.ಕೆ.  ಜನಪದ ಅನುಭವಗಳ ಪ್ರತಿಫಲನದಿಂದ  ಹೊರಹೊಮ್ಮಿದ ಜನಪದ ಸಾಹಿತ್ಯವು ನಮ್ಮ ಕನ್ನಡ ಸಾಹಿತ್ಯ ಸಮೃದ್ಧಿಯನ್ನು ಇಮ್ಮಡಿಗೊಳಿಸಿದೆ.

ಮೂಲ ಜನಪದ ಸಾಹಿತ್ಯ ಇಂದು ನಮ್ಮಿಂದ ಕಣ್ಮರೆಯಾಗುತ್ತಿರುವುದು  ಅತ್ಯಂತ ವಿಷಾದನೀಯ. ಈ ಜಾಗತೀಕರಣದ ಕಾಲಘಟ್ಟದಲ್ಲಿ ಆಧುನಿಕ ಜೀವನ ಶೈಲಿಯ ಪರಿಣಾಮಗಳಿಂದ  ಜನರ ಅಭಿರುಚಿಯು ಬದಲಾವಣೆಯಾಗುತ್ತಿದೆ. ಇತ್ತೀಚಿನ ಅಶ್ಲೀಲ ಜನಪದ ಸಾಹಿತ್ಯ ಜನಮನವನ್ನು ಗಾಢವಾಗಿ ಆಕರ್ಷಿಸುತ್ತಿರುವುದು ಸೋಜಿಗ ಎಂದು ಆಶಯ ನುಡಿಗಳ ಮೂಲಕ ಹಂಚಿಕೊಂಡರು. ಸಂಸ್ಥೆಯ ಸ್ಥಾನಿಕ ಆಡಳಿತ ಮಂಡಳಿಯ ಹಿರಿಯ ಸದಸ್ಯರಾದ ಶ್ರೀ ಮಾದಗೌಡ ಬಿ ಪಾಟೀಲ, ಎನ್ ಎಸ್ ಎಸ್ ಕಾರ್ಯಕ್ರಮ ಅಧಿಕಾರಿ  ಶ್ರೀ ಎಂ ಎಸ್ ಕೌಲಗುಡ್ಡ ವಾಣಿಜ್ಯ ವಿಭಾಗದ ಸಂಯೋಜಕರು, ಚುಟುಕು ಕವಿ ಪ್ರೊ ಎಲ್ ಎಸ್ ವಂಟಮೂರೆ ವೇದಿಕೆಯ ಮೇಲೆ ಉಪಸ್ಥಿತರಿದ್ದರು.ಕು ಸಾಕ್ಷಿ ಕೋಳಿ ಹಾಗೂ ಸಂಗಡಿಗರು ಎನ್ ಎಸ್ ಎಸ್ ಗೀತೆ ಹಾಡಿದರು.ಕು ಗಾಯತ್ರಿ ಧಾಬಡೆ ಸ್ವಾಗತಿಸಿದರು. ಕು ಸಾನಿಕಾ ಮುಳಿಕ ಅತಿಥಿಗಳನ್ನು ಪರಿಚಯಿಸಿದರು. ಕು ಸಾಕ್ಷಿ ಪಾಟೀಲ ಹಾಗೂ ಕು ಸಾಕ್ಷಿ ಕೋಳಿ ನಿರೂಪಿಸಿದರು. ಕು ಸುಪ್ರಿಯಾ ಚೌಗಲೆ ವಂದಿಸಿದರು.

ವರದಿ ರಾಜು ಮುಂಡೆ 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!