ತುರುವೇಕೆರೆ: ಕರ್ನಾಟಕ ಸರ್ಕಾರದ ಭಾಗವಾದ ಔಷಧ ನಿಯಂತ್ರಣ ಇಲಾಖೆಯು ವಿಶ್ವ ಫಾರ್ಮಾಸಿಸ್ಟ್ ದಿನದ ಅಂಗವಾಗಿ ತುಮಕೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಟ್ಟಣದ ಅಭಿನೇತ್ರಿ ಮೆಡಿಕಲ್ಸ್ ನ ಮಾಲೀಕ ಎಂ.ನರಸಿಂಹಮೂರ್ತಿ ಅವರಿಗೆ ಬೆಸ್ಟ್ ಫಾರ್ಮಾಸಿಸ್ಟ್ ೨೦೨೫ ಎಂಬ ಪ್ರಶಸ್ತಿ ನೀಡಿ ಗೌರವಿಸಿದೆ.
ತುಮಕೂರು ಉಪ ಔಷಧ ನಿಯಂತ್ರಕರ ಕಛೇರಿ, ತುಮಕೂರು ಜಿಲ್ಲಾ ಔಷಧ ವ್ಯಾಪಾರಿಗಳ ಸಂಘ, ಶ್ರೀಕೃಷ್ಣ ಕಾಲೇಜ್ ಆಫ್ ಫಾರ್ಮಸಿ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ವಿಶ್ವ ಔಷಧ ತಜ್ಞರ ದಿನ 2025 ರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ತುಮಕೂರು ಕೆಮಿಸ್ಟ್ ಮತ್ತು ಡ್ರಗಿಸ್ಟ್ ಅಸೋಸಿಯೇಷನ್ ಅಧ್ಯಕ್ಷ ಎನ್.ಎಸ್.ಪಂಡಿತ್ ಜವಹರ್, ಗುಣಮಟ್ಟದ ಔಷಧವನ್ನು ಮಾರುಕಟ್ಟೆಗೆ ತಂದು ಜನರಿಗೆ ಆರೋಗ್ಯ ಭಾಗ್ಯ ಕಲ್ಪಿಸುವಲ್ಲಿ ಔಷಧ ತಜ್ಞರ ಪಾತ್ರ ದೊಡ್ಡದಾಗಿದೆ.
ಸಾಮಾನ್ಯವಾಗಿ ಜನರ ಕಣ್ಣಿಗೆ ವೈದ್ಯರು, ಶುಶ್ರೂಶಕರು ಮಾತ್ರ ಕಾಣುತ್ತಾರೆ. ಆದರೆ ಶೇ.೫೦ಕ್ಕೂ ಹೆಚ್ಚು ಜನರಿಗೆ ನೇರವಾಗಿ ಸಂಪರ್ಕ ಹೊಂದಿ ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ಉತ್ತಮ ಔಷಧ ನೀಡಿ, ಸಲಹೆ, ಮಾರ್ಗದರ್ಶನ ಮಾಡುವ ಔಷಧ ತಜ್ಞರು ಗೌರವಿಸಲ್ಪಡುವುದು ಕಡಿಮೆ. ಇಂದು ಜನರ ಸೇವೆಯಲ್ಲಿ ತೊಡಗಿರುವ ಔಷಧ ತಜ್ಞರನ್ನು ಗುರುತಿಸಿ ಗೌರವಿಸುವ ಅವರ ಸೇವೆಯನ್ನು ಸ್ಮರಿಸುವ ದಿನವಾಗಿದ್ದು, ನಾವೆಲ್ಲರೂ ಹೆಮ್ಮೆಯಿಂದ ಔಷಧ ತಜ್ಞರ ನಿಸ್ವಾರ್ಥ ಸೇವೆಯನ್ನು ಶ್ಲಾಘಿಸಬೇಕಿದೆ ಎಂದರು.
ಯಾವುದೇ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದರೂ ಔಷಧ ಪಡೆಯಲು ಔಷಧಿ ಅಂಗಡಿಗೆ ತೆರಳಬೇಕು. ವೈದ್ಯರು ಬರೆದುಕೊಡುವ ಔಷಧಿಯ ಹೆಸರನ್ನು ಅರ್ಥೈಸಿಕೊಂಡು ಔಷಧ ನೀಡಿ ಅದು ಯಾವ ಔಷಧಿ ಎಷ್ಟು ಹೇಗೆ ಪಡೆದುಕೊಳ್ಳಬೇಕೆಂಬ ವಿವರವನ್ನೂ ಔಷಧ ತಜ್ಞರು ನೀಡುತ್ತಾರೆ. ಅಂತಹ ಸೇವಾ ಮನೋಭಾವವುಳ್ಳ ಔಷಧಿ ತಜ್ಞರನ್ನು ಗುರುತಿಸಿ ವಿಶ್ವ ಫಾರ್ಮಾಸಿಸ್ಟ್ ದಿನದಂದು ಅವರನ್ನು ಗೌರವಿಸುವ ಕೆಲಸಕ್ಕೆ ಸರ್ಕಾರ ಮುಂದಾಗಿರುವುದು ಶ್ಲಾಘನೀಯ ಸಂಗತಿಯಾಗಿದೆ ಎಂದ ಅವರು, ಔಷಧ ತಜ್ಞರುಗಳು ವೈದ್ಯರ ಚೀಟಿಯಿಲ್ಲದೆ ಯಾವುದೇ ಔಷಧವನ್ನು ಗ್ರಾಹಕರಿಗೆ ನೀಡಬಾರದು. ಔಷಧ ಮಾರಾಟಕ್ಕೆ ಸಂಬಂಧಿಸಿದ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡುವುದರಿಂದ ನಮಗೂ ಹಾಗೂ ಗ್ರಾಹಕರಿಗೂ ಒಳ್ಳೆಯದು ಎಂದರು.
ಉತ್ತಮ ಫಾರ್ಮಾಸಿಸ್ಟ್ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಎಂ.ನರಸಿಂಹಮೂರ್ತಿ, ತುಮಕೂರು ಜಿಲ್ಲೆಯಲ್ಲಿ ಗ್ರಾಮಾಂತರ ಪ್ರದೇಶದಿಂದ ಉತ್ತಮ ಔಷಧ ತಜ್ಞ ಎಂದು ನನ್ನನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಿದ ರಾಜ್ಯ ಸರ್ಕಾರಕ್ಕೆ, ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ಪದಾಧಿಕಾರಿಗಳಿಗೆ ಹಾಗೂ ಜಿಲ್ಲೆಯ ಎಲ್ಲಾ ಔಷಧ ತಜ್ಞರಿಗೆ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು.
ಗ್ರಾಮೀಣ ಭಾಗದಲ್ಲಿ ಬಹಳಷ್ಟು ಮಂದಿ ರೋಗಿಗಳು ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಲು ಸಾಧ್ಯವಾಗದೆ ನೇರವಾಗಿ ನಮ್ಮ ಬಳಿ ಔಷಧಿಗಾಗಿ ಬರುತ್ತಾರೆ, ನಾವು ಅವರ ಹಳೆಯ ಚಿಕಿತ್ಸಾ ವರದಿಗಳನ್ನು ಪರಿಶೀಲಿಸಿ ಅವರಿಗೆ ಉತ್ತಮ ಕಂಪನಿಯ ಔಷಧ ನೀಡಿ ಆರೋಗ್ಯ ಸುಧಾರಣೆಯಾಗುವಂತೆ ಮಾಡುವುದು ನಮ್ಮ ಜವಾಬ್ದಾರಿಯಾಗಿದೆ. ವ್ಯಾಪಾರ ಮನೋಭಾವವಷ್ಠೇ ಅಲ್ಲದೆ ಸೇವಾ ಮನೋಭಾವವು ಸಹ ನಮ್ಮಲ್ಲಿರಬೇಕಿದೆ.
ಪ್ರಸ್ತುತ ದಿನಮಾನದಲ್ಲಿ ಆನ್ ಲೈನ್ ಮೂಲಕವೂ ಔಷಧಗಳು ದೊರೆಯುತ್ತಿದೆ. ಆದರೆ ಔಷಧ ತಜ್ಞರಾದವರು ತಮ್ಮ ಅಂಗಡಿಯಲ್ಲಿ ಕುಳಿತು ಕೇವಲ ವ್ಯಾಪಾರ, ಲಾಭವನ್ನು ಮಾತ್ರ ಗಮನದಲ್ಲಿರಿಸಿಕೊಳ್ಳದೆ ನಿಸ್ವಾರ್ಥತೆಯಿಂದ ರೋಗಿಗಳಿಗೆ ಉತ್ತಮ ಸೇವೆಯನ್ನು ನೀಡಿದರೆ ನಮಗೆ ಯಾರೂ ಸ್ಪರ್ಧೆ ನೀಡಲಾಗುವುದಿಲ್ಲ. ಜನರ ವಿಶ್ವಾಸಾರ್ಹತೆಗೆ ಕುಂದುಬರದಂತೆ ನಾವು ನಡೆದುಕೊಳ್ಳಬೇಕಿದೆ. ನಮ್ಮನ್ನು ನಂಬಿ ಬರುವ ಗ್ರಾಹಕರು ನಮ್ಮ ಕುಟುಂಬದವರೆಂದು ಭಾವಿಸಿ ಔಷಧವನ್ನು ನೀಡಬೇಕಿದೆ. ಆಗ ನಾವು ಎಷ್ಟೇ ಬಹುರಾಷ್ಟ್ರೀಯ ಕಂಪನಿಗಳು ಬಂದರೂ ನಮ್ಮ ವೃತ್ತಿಯಲ್ಲಿ ಯಶಸ್ಸನ್ನು ಸಾಧಿಸಬಹುದಾಗಿದೆ. ಬಹುರಾಷ್ಟ್ರೀಯ ಕಂಪನಿಗಳು ಬಂದಾಗ ನಮ್ಮ ವ್ಯಾಪಾರಕ್ಕೆ ಸ್ವಲ್ಪ ಕಷ್ಟವಾಗಬಹುದು ಆದರೆ ನಮ್ಮನ್ನು ಸರ್ವನಾಶ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದು ನುಡಿದರು.
ಈ ಸಂದರ್ಭದಲ್ಲಿ ತುರುವೇಕೆರೆ ಅಭಿನೇತ್ರಿ ಮೆಡಿಕಲ್ಸ್ ನ ಎಂ.ನರಸಿಂಹಮೂರ್ತಿ, ತುಮಕೂರಿನ ಗಂಗಾ ಮೆಡಿಕಲ್ಸ್ ನ ಮಾಲೀಕ ಎಸ್.ಮಂಜುನಾಥ್ ಅವರಿಗೆ ಬೆಸ್ಟ್ ಫಾರ್ಮಾಸಿಸ್ಟ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶ್ರೀ ಕೃಷ್ಣ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಮರಿಚನ್ನಮ್ಮ, ಸಹಾಯಕ ಔಷಧ ನಿಯಂತ್ರಣಾಧಿಕಾರಿಗಳಾದ ಚಂದ್ರಕಲಾ ಶಿಲ್ಪ, ಸುರೇಶ್ ಸೇರಿದಂತೆ ಜಿಲ್ಲೆಯ ಔಷಧ ತಜ್ಞರು ಉಪಸ್ಥಿತರಿದ್ದರು.
ವರದಿ: ಗಿರೀಶ್ ಕೆ ಭಟ್, ತುರುವೇಕೆರೆ




