ಬೀದರ್ : ಆನ್ಲೈನ್ ಗೇಮ್ ಚಟಕ್ಕೆ ಬಿದ್ದು ಲಕ್ಷ ಲಕ್ಷ ಸಾಲ ಮಾಡಿದ್ದ ಬೀದರ್‌ನ ಯುವಕ ವಿಜಯಕುಮಾರ್ ಜಗನ್ನಾಥ ಹೊಳ್ಳೆ ಸಾವನ್ನಪ್ಪಿದ್ದಾನೆ.
ಆನ್‌ಲೈನ್ ಗೇಮ್ ಹುಚ್ಚಾಟಕ್ಕೆ ಬಿದ್ದ ಯುವಕ ವಿಜಯ್‌ಕುಮಾರ್ ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡು ಕೊನೆಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ. ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಜ್ಯೋತಿ ತಾಂಡದ ನಿವಾಸಿಯಾಗಿದ್ದ ಈತ ಮೂಲತಃ ಹುಲಸೂರು ತಾಲೂಕಿನ ಬೇಲೂರು ಗ್ರಾಮದವನು.
ಬಿ-ಫಾರ್ಮಾ ಪದವೀದರನಾಗಿದ್ದ ವಿಜಯಕುಮಾರ್ ಆನ್ಲೈನ್ ಜೂಜಾಟದ ಹುಚ್ಚಿಗೆ ಬಿದ್ದು ಮೊದಲು 10 ಲಕ್ಷ ಸಾಲ ಮಾಡಿಕೊಂಡಿದ್ದನು. ಈ ಸಾಲವನ್ನು ಕುಟುಂಬಸ್ಥರು ಈಗಾಗಲೇ ತೀರಿಸಿದ್ದರು.
ಆದರೆ ತನ್ನ ಜೂಜಾಟ ಬಿಡದ ಯುವಕ ಮತ್ತೆ 2 ಲಕ್ಷ ಸಾಲ ಮಾಡಿಕೊಂಡಿದ್ದನು. ಆದರೆ ಈ ಬಾರಿ ಸಾಲದ ವಿಷಯ ಮನೆಯವರಿಗೆ ತಿಳಿಸದೇ ಮ್ಯಾನೇಜ್ ಮಾಡಲು ನಿರ್ಧರಿಸಿದ್ದ. ಸಾಲ ತೀರಿಸಲು ಯಾವುದೇ ದಾರಿ ಕಾಣದಾದಾಗ ಪೆಟ್ರೋಲ್ ಸುರಿದುಕೊಂಡು, ಬೆಂಕಿ ಹಚ್ಚಿಕೊಂಡು ಯುವಕ ಆತ್ಮಹತ್ಯೆಗೆ ಯತ್ನಿಸಿದ್ದ.
ಗಂಭೀರವಾಗಿ ಗಾಯಗೊಂಡಿದ್ದ ಯುವಕನನ್ನು ಬೀಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ವಿಜಯ್‌ಕುಮಾರ್ ಸಾವನ್ನಪ್ಪಿದ್ದಾನೆ