ಬೆಳಗಾವಿ: ಮುಸ್ಲಿಂ ಹುಡುಗ ನನ್ನ ಮಗಳನ್ನು ಕಿಡ್ನ್ಯಾಪ್ ಮಾಡಿಕೊಂಡು ಹೋಗಿದ್ದಾನೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ತಾಯಿಗೆ ಶಾಕ್ ಆಗಿದೆ.
ಮುಸ್ಲಿಂ ಯುವಕನೊಂದಿಗೆ ಓಡಿ ಹೋದ ಯುವತಿ, ನಾನು ಮದುವೆಯಾಗಿದ್ದೀನಿ, ಮನೆಗೆ ವಾಪಸ್ ಬರಲ್ಲ ಎಂದು ಹೇಳಿದ್ದಾಳೆ.ಮಗಳ ಮಾತಿನಿಂದ ತಾಯಿ ಠಾಣೆಯಲ್ಲೇ ಕುಸಿದು ಬಿದ್ದಿದ್ದಾರೆ.
ಈ ಘಟನೆ ಬೆಳಗಾವಿ ಜಿಲ್ಲೆಯ ಸಂತಿ ಬಸ್ತವಾಡ ಗ್ರಾಮದಲ್ಲಿ ನಡೆದಿದೆ. 22 ದಿನಗಳ ಹಿಂದೆ ರಾಧಿಕಾ ಮುಚ್ಚಂಡಿ ಮತ್ತು ಸದ್ರುದಿನ್ ಬೇಪಾರಿ ಎಂಬ ಜೋಡಿ ನಾಪತ್ತೆಯಾಗಿದ್ದರು. ರಾಧಿಕಾ ಅವರ ತಾಯಿ ದೀಪಾ ಅವರು ಮಗಳನ್ನು ಕಿಡ್ನಾಪ್ ಮಾಡಲಾಗಿದೆ ಎಂದು ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರು ಜೋಡಿಯನ್ನು ಮುಂಬೈನಲ್ಲಿ ಪತ್ತೆ ಮಾಡಿ ಬೆಳಗಾವಿಗೆ ಕರೆತಂದಿದ್ದಾರೆ.
ಈ ವೇಳೆ ರಾಧಿಕಾ, ನಾನು ಸದ್ರುದಿನ್ನನ್ನು ಪ್ರೀತಿಸಿ ಮದುವೆಯಾಗಿದ್ದೇನೆ. ನಾನು ನನ್ನ ಗಂಡನ ಜೊತೆಗೆ ಇರುತ್ತೇನೆ ಎಂದು ಹೇಳಿದ್ದಾಳೆ. ಈ ವೇಳೆ ದೀಪಾ ಮಗಳನ್ನು ಮನೆಗೆ ಕಳುಹಿಸುವಂತೆ ಅಂಗಲಾಚಿದ್ದಾರೆ.
ನಾವೇ ಮದುವೆ ಮಾಡಿ ಕೊಡುತ್ತೇವೆ ಎಂದು ಹೇಳಿ ಕಣ್ಣೀರು ಹಾಕಿದ್ದಾರೆ. ಆದರೆ ಇದಕ್ಕೆ ರಾಧಿಕಾ ಒಪ್ಪದಿದ್ದಾಗ ತಾಯಿ ಠಾಣೆಯಲ್ಲೇ ಕುಸಿದು ಬಿದ್ದಿದ್ದಾರೆ. ತಕ್ಷಣ ಸಂಬಂಧಿಕರು ದೀಪಾ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.




