ಮಂಗಳೂರು: ಕರಾವಳಿಯಲ್ಲಿ ಮಾರ್ಚ್ ಬಂತೆಂದರೆ ವಿಪರೀತ ಸೆಕೆ ಮನುಷ್ಯರನ್ನು ಹೈರಾಣು ಮಾಡುತ್ತದೆ. ಈ ಬಾರಿ ಫೆಬ್ರವರಿಗೆ ಬಿಸಿ ಗಾಳಿ ಸಂಕಷ್ಟವನ್ನು ಜನರು ಎದುರಿಸುತ್ತಿದ್ದಾರೆ. ಇದರ ನಡುವೆ ಮೂಕಪ್ರಾಣಿಗಳು ವಿಪರೀತ ಸೆಕೆಗೆ ಸಂಕಷ್ಟ ಪಡುತ್ತಿದೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಪ್ರೌಢಶಾಲೆಯ ವಿದ್ಯಾರ್ಥಿಗಳು ಹಕ್ಕಿಗಳಿಗೆ ನೀರುಣಿಸುವ ವಿಶೇಷ ಅಭಿಯಾನ ಮಾಡುತ್ತಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮೊಡಂಕಾಪುವಿನ ಕಾರ್ಮೆಲ್ ಪ್ರೌಢಶಾಲೆಯಲ್ಲಿ ಈ ವಿಶೇಷ ಅಭಿಯಾನ ಮಾಡಲಾಗುತ್ತಿದೆ. ಈ ಪ್ರೌಢಶಾಲೆಯಲ್ಲಿ ಕಳೆದ 5 ವರ್ಷಗಳಿಂದ ಹಕ್ಕಿಗಳಿಗೆ ನೀರುಣಿಸುವ ಚಿಂವ್ ಚಿಂವ್ ಅಭಿಯಾನ ಮಾಡಲಾಗುತ್ತಿದೆ. ಶಾಲೆಯ ಶಿಕ್ಷಕ ರೋಶನ್ ಅವರ ನೇತೃತ್ವದಲ್ಲಿ ಈ ಅಭಿಯಾನ ನಡೆಸಲಾಗುತ್ತಿದ್ದು, ಮಕ್ಕಳು ಇದರಲ್ಲಿ ತೊಡಗಿಸಿಕೊಂಡಿದ್ದಾರೆ.
ಈ ಪ್ರೌಢಶಾಲೆಯಲ್ಲಿ 117 ವಿದ್ಯಾರ್ಥಿಗಳನ್ನು ಈ ಅಭಿಯಾನದಲ್ಲಿ ತೊಡಗಿಸಿಕೊಳ್ಳಲಾಗಿದೆ. ವಿದ್ಯಾರ್ಥಿಗಳಿಗೆ ಪ್ರೌಢಶಾಲೆಯಲ್ಲಿ ಹಕ್ಕಿಗಳಿಗೆ ನೀರುಣಿಸುವ ಕಾರ್ಯದ ಬಗ್ಗೆ ಮಾಹಿತಿ ನೀಡಿದ್ದು ಮಾತ್ರವಲ್ಲದೇ, ಅವರ ಮನೆಯಲ್ಲಿಯೂ ಹಕ್ಕಿಗಳಿಗೆ ನೀರುಣಿಸಲು ಪ್ರೇರೆಪಿಸಲಾಗಿದೆ. ಪರಿಣಾಮ ಪ್ರೌಢಶಾಲೆಯಲ್ಲಿ ಮತ್ತು ಮಕ್ಕಳ ಮನೆಯಲ್ಲಿ ಒಟ್ಟು 252 ಕಡೆ ಹಕ್ಕಿಗಳಿಗೆ ನೀರುಣಿಸುವ ಕೆಲಸ ಮಾಡುತ್ತಿದ್ದಾರೆ.