ಧಮತರಿ: ಛತ್ತೀಸ್ಗಡದ ಧಮತರಿ ಜಿಲ್ಲೆಯ ಸಿರಿದ್ ವಾರ್ಡ್ನಲ್ಲಿ ಸಂಭ್ರಮ ಮೆಳೈಸಿದ್ದು, ಕೇವಲ ಮನೆಮಂದಿಯಷ್ಟೇ ಅಲ್ಲ ಊರಿಗೆ ಊರೇ ಸಂಭ್ರಮಪಟ್ಟಿದ್ದು ವಿಶೇಷ. ಕಾರಣ ಅಲ್ಲಿ ನಡೆದಿದ್ದು, ಕರುವಿನ ನಾಮಕರಣ ಶಾಸ್ತ್ರ ಹಾಗೂ ಹುಟ್ಟು ಹಬ್ಬದ ಸಂಭ್ರಮ.
ತಮ್ಮ ಮನೆಯ ಸದಸ್ಯನಂತೆ ಇರುವ ಮುದ್ದಿನ ಕರುವಿನ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಬೆಕು ಎಂದು ನಿರ್ಧರಿಸಿದ ಕುಟುಂಬ ಅಂದುಕೊಂಡಿದ್ದನ್ನು ಮಾಡಿ ತೋರಿಸಿದೆ. ಆ ಮೂಲಕ ಗ್ರಾಮಕ್ಕೆ ಗ್ರಾಮವೇ ಸಂಭ್ರಮ ಪಡುವಂತೆ ಮಾಡಿದೆ. ಈ ಸಂಭ್ರಮಕ್ಕೆ ಸುತ್ತಮುತ್ತಲಿನ ಜನರು ಕೂಡ ಭಾಗಿಯಾಗಿದ್ದು, ಕರುವಿಗೆ ಉಡುಗೊರೆಗಳನ್ನು ನೀಡಿರುವುದು ವಿಶೇಷ.
ಸೊರಿದ್ ವಾರ್ಡ್ನ ಬಾಬುಲಾಲ್ ಸಿನ್ಹಾ ಕುಟುಂಬ ಸದಸ್ಯರಿಗೆ ರಸ್ತೆ ಬದಿಯಲ್ಲಿ ನಾಯಿ ದಾಳಿಗೆ ಒಳಗಾಗಿ ಹಸುವೊಂದು ಒದ್ದಾಟ ನಡೆಸಿತ್ತು. ನಾಯಿಗಳ ಕಡಿತದಿಂದ ಗಾಯಗೊಂಡು ನರಳಾಟ ನಡೆಸುತ್ತಿತ್ತು. ಹೀಗೆ ಸಂಕಷ್ಟದಲ್ಲಿದ್ದ ಈ ಹಸುವನ್ನು ಕಂಡ ಸಿನ್ಹಾ ಕುಟುಂಬಸ್ಥರು ಮಮ್ಮಲ ಮರುಗಿದ್ದರು, ಅದನ್ನು ಮನೆಗೆ ಕರೆದು ತಂದು ಆರೈಕೆ ಮಾಡಿದ್ದರು. ಮನೆಗೆ ಆಗಮಿಸಿದ ಆ ಹಸು ಮನೆಯ ಸದಸ್ಯೆ ಕೂಡಾ ಆಯಿತು. ಅದು ಈಗ ಮನೆಯ ಖಾಯಂ ಸದಸ್ಯನಾಗಿದ್ದು, ಮುದ್ದಾದ ಕರುವಿಗೆ ಜನ್ಮ ನೀಡಿದೆ. ಆ ಕರುವಿಗೆ ಈ ಕುಟುಂಬ ಹುಟ್ಟುಹಬ್ಬ ಆಚರಿಸಿ ಸಂತಸ ವ್ಯಕ್ತಪಡಿಸಿದೆ.
ಈ ಕುರಿತು ಮಾತನಾಡಿದ ಬಾಬುಲಾಲ್ ಸಿನ್ಹಾ, ಕರುವಿನ ಹುಟ್ಟು ಹಬ್ಬದ ಜೊತೆಗೆ ಅದಕ್ಕೆ ನಾಮಕರಣ ಮಾಡಿದ್ದು, ರಾಧಿಕಾ ಎಂದು ಹೆಸರಿಟ್ಟಿದ್ದೇವೆ. ಇದರ ಅಮ್ಮ ಹಸು ನಮಗೆ ಸಿಕ್ಕಾಗ ಅದು ಗಾಯಗೊಂಡಿತ್ತು. ಅದರ ಪಾಲನೆ ಮಾಡಿ ನಮ್ಮ ಜೊತೆಯೇ ಇರಿಸಿಕೊಂಡೆವು. ಅದು ಕರುವಿಗೆ ಜನ್ಮ ನೀಡಿತು. ಆದರೆ, ಕಾಲಿನ ಸಮಸ್ಯೆ ಇದ್ದ ಹಿನ್ನೆಲೆಯಲ್ಲಿ ಅದಕ್ಕೆ ಮೂರು ಆಪರೇಷನ್ ಮಾಡಿಸಿದೆವು. ವೈದ್ಯರ ಚಿಕಿತ್ಸೆ ನಮ್ಮ ಆರೈಕೆಯಿಂದ ಇದೀಗ ಆರೋಗ್ಯಯುತವಾಗಿದೆ ಎಂದು ಹೇಳಿದರು.
ಮಕ್ಕಳ ಹುಟ್ಟು ಹಬ್ಬದಂತೆ ನಡೆದ ಕಾರ್ಯಕ್ರಮ: ಮಾರ್ಚ್ 2ರಂದು ಈ ಹುಟ್ಟು ಹಬ್ಬದ ಸಂಭ್ರಮಾಚರಣೆ ಕಾರ್ಯಕ್ರಮ ಕೈಗೊಳ್ಳಲಾಗಿತ್ತು. ಮೊದಲಿಗೆ ಸತ್ಯನಾರಾಯಣ ಕಥೆ ನಡೆಸಲಾಯಿತು. ಬಳಿಕ ಸಂಜೆ 7ಕ್ಕೆ ಕೇಕ್ ಕತ್ತರಿಸಲಾಯಿತು. ಇದಾದ ಬಳಿಕ ರಾಮಾಯಣ ಮಂಡಲ ಕಾರ್ಯಕ್ರಮ ನಡೆಸಲಾಯಿತು. ನಂತರ ಆಗಮಿಸಿದ ಅತಿಥಿಗಳಿಗೆ ಔತಣಕೂಟ ಕೂಡಾ ಏರ್ಪಡಿಸಲಾಗಿತ್ತು. ಕರುವಿನ ಜನ್ಮದಿನಕ್ಕೆ ಸುಮಾರು 300 ಜನರಿಗೆ ಆಹಾರಕ್ಕಾಗಿ ವ್ಯವಸ್ಥೆ ಮಾಡಲಾಗಿತ್ತು.