ಬೆಂಗಳೂರು : SC/ST ಪರಿಶಿಷ್ಟ ಜಾತಿ-ಪಂಗಡ, ಹಿಂದುಳಿದವರು ಹಾಗೂ ಮುಸ್ಲಿಂ ಸಮುದಾಯದ ಗುತ್ತಿಗೆದಾರರಿಗೆ ರೂ.2 ಕೋಟಿ ವೆಚ್ಚದ ಕಾಮಗಾರಿಗಳು, ರೂ.1 ಕೋಟಿವರೆಗಿನ ಸರಕು ಮತ್ತು ಸೇವೆಗಳ ಪೂರೈಕೆಯ ಟೆಂಡರ್‌ನಲ್ಲಿ ಮೀಸಲಾತಿ ಕಲ್ಪಿಸುವ ತೀರ್ಮಾನದ ಜೊತೆಗೆ ಸರ್ಕಾರಿ ಗುತ್ತಿಗೆಯಲ್ಲಿ ಮುಸ್ಲಿಂ ಸಮುದಾಯದವರಿಗೆ ಶೇ.4ರಷ್ಟು ಮೀಸಲಾತಿ ನೀಡಲು ರಾಜ್ಯ ಸಚಿವ ಸಂಪುಟ ಈಗಾಗಲೇ ಅನುಮೋದನೆ ನೀಡಿದೆ.
ಮುಸ್ಲಿಂ ಸಮುದಾಯಕ್ಕೆ ಮೀಸಲಾತಿ ನೀಡಲು ಮುಂದಾಗಿರುವ ಸರ್ಕಾರದ ಈ ನಡೆಗೆ ಬಿಜೆಪಿ ತೀವ್ರವಾಗಿ ಖಂಡಿಸಿದ್ದಲ್ಲದೇ ಅತಿ ದೊಡ್ಡ ಅಸ್ತ್ರವಾಗಿ ಪ್ರತಿಪಕ್ಷಗಳಿಗೆ ಸಿಕ್ಕಂತಾಗಿದೆ.
ರಾಜ್ಯ ಕಾಂಗ್ರೆಸ್ ಕೆಟಿಪಿಪಿ ಕಾಯ್ದೆಗೆ ತಿದ್ದುಪಡಿ ತಂದು ಸರ್ಕಾರಿ ಟೆಂಡರ್‌ಗಳಲ್ಲಿ ಮುಸ್ಲಿಂ ಗುತ್ತಿಗೆದಾರರಿಗೆ ಶೇ. 4 ರಷ್ಟು ಮೀಸಲಿಟ್ಟಿದೆ. ಇದು ಅಲ್ಪಸಂಖ್ಯಾತರ ಓಲೈಕೆಯ ತುಷ್ಠೀಕರಣದ ರಾಜಕೀಯ. ಇದರಿಂದ ಒಬಿಸಿ, ಎಸ್‌ಸಿ ಮತ್ತು ಎಸ್‌ಟಿ ಸಮುದಾಯಗಳ ಮೇಲೆ ಸರ್ಕಾರ ಬಹಿರಂಗ ದಾಳಿ ಮಾಡಿದೆ.
ಕಾಂಗ್ರೆಸ್, ಒಬಿಸಿಗಳಿಂದ ಶೇ.4ರಷ್ಟು ಕಸಿದುಕೊಂಡು ಪ್ರವರ್ಗ-II ಬಿ ಅಡಿಯಲ್ಲಿ ಮುಸ್ಲಿಮರಿಗೆ ಹಸ್ತಾಂತರಿಸಿದೆ ಎಂದು ಬಿಜೆಪಿ ಕುಟುಕಿದೆ.
ಈ ವಿಷಯವನ್ನೇ ಮುಂದಿಟ್ಟುಕೊಂಡು ರಾಷ್ಟ್ರ ರಾಜಕಾರಣ ಮಟ್ಟದಲ್ಲೂ ಬಿಜೆಪಿಯು ಕಾಂಗ್ರೆಸ್ ಮೇಲೆ ಮುಗಿಬಿದ್ದಿದೆ. ಬಜೆಟ್ನಲ್ಲಿ ಘೋಷಿಸಿದಂತೆ ಮೀಸಲಾತಿ ತರಲು ಇದೇ ಅಧಿವೇಶನದಲ್ಲಿ ವಿಧೇಯಕ ಮಂಡಿಸಲು ಸರ್ಕಾರ ನಿರ್ಧರಿಸಿದೆ ಎಂದು ತಿಳಿದುಬಂದಿದೆ.