ಬೆಂಗಳೂರು :– ‘ಹಿಂದೂಗಳ ಹೆಸರಿನಲ್ಲಿ ಅಧಿಕಾರಕ್ಕೆ ಬಂದಿರುವ ಕೇಂದ್ರ ಬಿಜೆಪಿ ಸರ್ಕಾರವು ಬಾಂಗ್ಲಾದೇಶದಲ್ಲಿ ಹಿಂದೂಗಳ ಕಗ್ಗೊಲೆ ಹಾಗೂ ಅತ್ಯಾಚಾರಗಳು ನಡೆಯುತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳದೆ ಕಣ್ಣು ಮುಚ್ಚಿಕೊಂಡು ಕುಳಿತಿದೆ’, ಎಂದು ಶ್ರೀರಾಮ ಸೇನೆಯ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಬಾಂಗ್ಲಾದಲ್ಲಿ ಹಿಂದೂಗಳ ನರಮೇಧ ನಡೆಯುತ್ತಿದ್ದರೂ ಕ್ರಮ ಕೈಗೊಳ್ಳದೆ ಕೈಕಟ್ಟಿ ಕುಳಿತಿರುವ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮಲ್ಲೇಶ್ವರಂ ನ ಬಿಜೆಪಿ ರಾಜ್ಯ ಕಚೇರಿಗೆ ಅಂತರಾಷ್ಟ್ರೀಯ ಹಿಂದೂ ಪರಿಷತ್ ರಾಷ್ಟ್ರೀಯ ಬಜರಂಗದಳ ಸೇರಿದಂತೆ ಹಲವಾರು ಹಿಂದೂ ಪರ ಸಂಘಟನೆಗಳೊಂದಿಗೆ ಮುತ್ತಿಗೆ ಹಾಕಿ ಕೇಂದ್ರ ಹಾಗೂ ರಾಜ್ಯ ಬಿಜೆಪಿ ನಾಯಕರ ವಿರುದ್ಧ ಘೋಷಣೆಗಳನ್ನು ಕೂಗಿ ಈಗಲಾದರೂ ಬಾಂಗ್ಲಾದ ಹಿಂದೂಗಳ ಪರ ಬಾಯಿಬಿಡಿ ಮೂಕ ಆಗಬೆಡಿ ಎಂದು ಆಗ್ರಹಿಸಿದರು.
ಇದೇ ವೇಳೆ ಮಾತನಾಡಿದ ಅಂತರಾಷ್ಟ್ರೀಯ ಹಿಂದೂ ಪರಿಷತ್ ರಾಷ್ಟ್ರೀಯ ಬಜರಂಗದಳದ ರಾಜ್ಯಾಧ್ಯಕ್ಷ ವಿ ಆನಂದ್, ‘ಬೆಂಗಳೂರಿನಲ್ಲಿ 10 ಲಕ್ಷಕ್ಕೂ ಅಧಿಕ ಹಾಗೂ ದೇಶದಲ್ಲಿ ಎರಡು ಕೋಟಿಗೂ ಹೆಚ್ಚು ಸಂಖ್ಯೆಯಲ್ಲಿ ಇರುವ ಬಾಂಗ್ಲಾದವರು ಸುರಕ್ಷಿತವಾಗಿದ್ದಾರೆ.
ಆದರೆ ನಮ್ಮಿಂದಲೇ ಸೃಷ್ಟಿಯಾದ ಬಾಂಗ್ಲಾದೇಶದಲ್ಲಿರುವ ಹಿಂದೂಗಳು ಸಂಕಷ್ಟದಲ್ಲಿದ್ದಾರೆ. ಹಿಂದುಗಳನ್ನು ಅಮಾನುಷವಾಗಿ ಕೊಲ್ಲಲಾಗುತ್ತಿದೆ. ಹೆಣ್ಣು ಮಕ್ಕಳನ್ನು ಅತ್ಯಾಚಾರ ಮಾಡಲಾಗುತ್ತಿದೆ. ಹೀಗಿದ್ದರೂ ಸಹ ಪ್ರದಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ಕಠಿಣವಾದ ನಿರ್ಧಾರ ತೆಗೆದುಕೊಳ್ಳಲು ಮೀನಾ ಮೇಷ ಎಣಿಸುತ್ತಿವೆ. ಇದು ಹೀಗೆ ಮುಂದುವರೆದಲ್ಲಿ ನಿಮಗೆ ಮತ ಹಾಕಿದ ಹಿಂದೂಗಳೇ ತಿರುಗಿ ಬಿದ್ದರೂ ಆಶ್ಚರ್ಯವಿಲ್ಲ’, ಎಂದು ಆನಂದ್ ಅವರು ವಾಗ್ದಾಳಿ ನಡೆಸಿದರು.
ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಿದ ಹಿನ್ನೆಲೆಯಲ್ಲಿ ಬಿಜೆಪಿ ಕಚೇರಿಯ ಮುಂಭಾಗದಲ್ಲಿ ಪೋಲಿಸ್ ಬಂದೋಬಸ್ತ್ ಮಾಡಲಾಗಿತ್ತು. ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಬಾಂಗ್ಲಾದೇಶದ ಹಿಂದೂಗಳ ರಕ್ಷಣೆಗೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಶ್ರೀರಾಮ್ ಸೇನೆಯ ರಾಜ್ಯ ಕಾರ್ಯದರ್ಶಿ ಅಮರ್, ಅಂತ ರಾಷ್ಟ್ರೀಯ ಹಿಂದು ಪರಿಷತ್ ರಾಷ್ಟ್ರೀಯ ಬಜರಂಗದಳದ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಕಾರ್ಯದರ್ಶಿ ಶಂಕರ್, ಸಂಚಾಲಕ ಶ್ರೀಕಾಂತ್, ಧರ್ಮ ಜಾಗೃತಿ ಸಂಘಟನೆಯ ಮುಖಂಡ ಅಂಜನಾ ಮೂರ್ತಿ ಲಗ್ಗೆರೆ,ಆರ್. ಎಸ್.ಎಸ್ ಮುಖಂಡರಾದ ಮುರಳಿ ಮೋಹನ್,ಮಲ್ಲಪ್ಪ, ಭಾರತ್ ಸೇರಿದಂತೆ ಮಹಿಳೆಯರು ಕಾರ್ಯಕರ್ತರು ಶ್ರೀರಾಮ ಸೇನೆಯ ಪದಾಧಿಕಾರಿಗಳು ಇತರೆ ಹಿಂದೂ ಪರ ಸಂಘಟನೆಗಳ ಮುಖಂಡರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ವರದಿ:- ಅಯ್ಯಣ್ಣ ಮಾಸ್ಟರ್