ಬೆಂಗಳೂರು: ಒಕ್ಕಲಿಗ ಸಮುದಾಯದ ಕುರಿತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೀಡಿರುವ ಹೇಳಿಕೆ ಸಮುದಾಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಕಾರಣ ಸೂಕ್ತ ಕ್ರಮ ಜರುಗಿಸುವಂತೆ ಒತ್ತಾಯಿಸಿ ಮಾಜಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ನೇತೃತ್ವದ ಬಿಜೆಪಿ ನಿಯೋಗವು ಮುಖ್ಯ ಚುನಾವಣಾಧಿಕಾರಿ ಕಚೇರಿಗೆ ದೂರು ನೀಡಿದೆ.
ಡಿ.ಕೆ.ಶಿವಕುಮಾರ್ ಹೇಳಿಕೆಯು ಒಕ್ಕಲಿಗ ಸಮುದಾಯ ಮತ್ತು ಆದಿಚುಂಚನಗಿರಿ ಸ್ವಾಮೀಜಿಗಳ ಅನುಯಾಯಿಗಳ ನಡುವಿನ ಭಿನ್ನಾಭಿಪ್ರಾಯಕ್ಕೆ ರಣವಾಗಲಿದೆ. ಇದು ಮತದಾರರ ನಡುವೆ ಕೋಮುವಾದಕ್ಕೆ ಕಾರಣವಾಗಲಿದೆ ಎಂದು ದೂರು ನೀಡಲಾಗಿದೆ.
ರಾಜಕೀಯ ನಾಯಕ ಕುರಿತು ಟೀಕಿಸುವಾಗ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ. ಒಕ್ಕಲಿಗರು ಮತ್ತು ಒಕ್ಕಲಿಗ ಸ್ವಾಮೀಜಿ ದಡ್ಡರಲ್ಲ. ರಾಜಕೀಯ ಪಕ್ಷಗಳಿಗೆ ಚುನಾವಣಾ ಆಯೋಗ ನೀಡಿರುವ ಸಲಹೆಗಳ ವಿರುದ್ಧ ಮತ್ತು ಆಧಾರ ರಹಿತ ಹೇಳಿಕೆ ನೀಡಿದ್ದಾರೆ.
ಬಿಜೆಪಿಯ ನಾಯಕರು ಒಕ್ಕಲಿಗ ಮುಖ್ಯಮಂತ್ರಿಯನ್ನು ಕೆಳಗಿಳಿಸುವಲ್ಲಿ ಪಾತ್ರವಹಿಸಿದ್ದರು ಎಂಬುದನ್ನು ಮರೆತಿಲ್ಲ ಎಂಬ ಹೇಳಿಕೆ ನೀಡಿದ್ದಾರೆ. ಈ ಸುಳ್ಳು ಆರೋಪಗಳು ಜನರ ಮೇಲೆ ಕೆಟ್ಟ ಪ್ರಭಾವ ಬೀರಲಿದೆ. ಲೋಕಸಭಾ ಚುನಾವಣೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಹೀಗಾಗಿ ಡಿ.ಕೆ.ಶಿವಕುಮಾರ್ ಹೇಳಿಕೆ ನೀತಿ ಸಂಹಿತೆ ಉಲ್ಲಂಘನೆಯಾಗಿದ್ದು, ಸೂಕ್ತ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಲಾಗಿದೆ.
ಹೆಬ್ಬಾಳ್ಕರ್, ಪ್ರಿಯಾಂಕ್ ವಿರುದ್ಧವೂ ದೂರು ಸಲ್ಲಿಕೆ
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ- ಜೆಡಿಎಸ್ ಕಾರ್ಯಕರ್ತರ ಮೇಲೆ ಹಲ್ಲೆ, ಜೀವ ಬೆದರಿಕೆ ಹಾಕುವ ಕುರಿತು ಮತ್ತೊಂದು ಮನವಿ ಸಲ್ಲಿಸಲಾಗಿದೆ. ಕಾನೂನು- ಸುವ್ಯವಸ್ಥೆ ಕಾಪಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಕೋರಲಾಗಿದೆ. ಅಲ್ಲದೇ, ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಪ್ರಿಯಾಂಕ್ ಖರ್ಗೆ ಅವರು ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರನ್ನು ಕೆಪಿಸಿಸಿಯ ಐಟಿ, ಬಿಟಿ ವಿಭಾಗದಲ್ಲಿ ಬಳಸಿಕೊಳ್ಳುತ್ತಿದ್ದಾರೆ. ಇದರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಸಹ ದೂರು ನೀಡಲಾಗಿದೆ.