ಬೆಳಗಾವಿ: ರೈತರನ್ನು ನಿರ್ಲಕ್ಷ್ಯ ಮಾಡುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ಧೋರಣೆ ಖಂಡಿಸಿ, ಕಬ್ಬಿಗೆ ಹೆಚ್ಚಿನ ಬೆಲೆ ನಿಗದಿ, ಬೆಳೆ ಪರಿಹಾರಕ್ಕೆ ಆಗ್ರಹಿಸಿ ರೈತರೊಂದಿಗೆ ಬಿಜೆಪಿ ನಾಯಕರು ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಿದ್ದು, ಬಿಜೆಪಿ ನಾಯಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬೆಳಗಾವಿಯ ಮಾಲಿನಿ ಸಿಟಿ ಮೈದನಾದಲ್ಲಿ ರೈತರೊಂದಿಗೆ ಬಿಜೆಪಿ ನಾಯಕರು ಪ್ರತಿಭಟನಾ ಸಭೆ ನಡೆಸಿದ್ದು, ಸಭೆ ಬಳಿಕ ಮಾಲಿನಿಸಿಟಿ ಮೈದಾನದಿಂದ ಪಾದಯಾತ್ರೆ ಮೂಲಕವಾಗಿ ಸುವರ್ಣಸೌಧದತ್ತ ಪಾದಯಾತ್ರೆ ಕೈಗೊಂಡಿದ್ದಾರೆ.
ಈ ವೇಳೆ ಸುವರ್ಣಸೌಧಕ್ಕೆ ಮುತ್ತಿಗೆ ಹಾಕುವ ನಿಟ್ಟಿನಲ್ಲಿ ಬಿಜೆಪಿ ನಾಯಕರು ಹಾಗೂ ರೈತರು ಮುನ್ನುಗ್ಗುತ್ತಿದ್ದಂತೆ ಪೊಲೀಸರು ಅವರನ್ನು ತಡೆದಿದ್ದಾರೆ.
ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ವಾಗ್ವಾದ, ಮಾತಿನ ಚಕಮಕಿ ನಡೆದಿದ್ದು, ಪರಿಸ್ಥಿತಿ ಕೈಮೀರುತ್ತಿದ್ದಂತೆ ಪೊಲೀಸರು ಬಿಜೆಪಿ ನಾಯಕರು ಹಾಗೂ ರೈತ ಮುಖಂಡರನ್ನು ವಶಕ್ಕೆ ಪಡೆದಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಆರ್.ಅಶೋಕ್, ಸಿ.ಟಿ.ರವಿ, ರೇಣುಕಾಚಾರ್ಯ ಹಾಗೂ ರೈತ ಮುಖಂಡರು ಸೇರಿದಂತೆ ಹಲವು ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದು ಕರೆದೊಯ್ದಿದ್ದಾರೆ.




