ಬೆಂಗಳೂರು : ರಾಜ್ಯದಲ್ಲಿ ಬೆಲೆ ಏರಿಕೆ ಖಂಡಿಸಿ ವಿಪಕ್ಷಗಳು ಅಹೋರಾತ್ರಿ ಧರಣಿ ನಡೆಸುವ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು, ಹಾಲಿನ ದರ ಏರಿಕೆ ಮಾಡಿ ಬಂದ ಹಣದಿಂದ ರೈತರಿಗೆ ವಾಪಸ್ ನೀಡಲೆಂದೆ ಹೆಚ್ಚಳ ಮಾಡಿದ್ದು, ಇದು ಬಿಜೆಪಿಗೆ ಇಷ್ಟವಿಲ್ಲ ಎಂದು ಕಿಡಿಕಾರಿದರು.
ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಬಸ್ ಹಾಗೂ ಮೆಟ್ರೋ ಟಿಕೆಟ್ ದರ ಬೆನ್ನಲ್ಲೇ ವಿದ್ಯುತ್, ಹಾಲಿನ ದರ ಏರಿಕೆ ಮಾಡಿದ್ದು, ಇದನ್ನು ಖಂಡಿಸಿ ಫ್ರೀಡಂ ಪಾರ್ಕ್‍ನಲ್ಲಿ ಬಿಜೆಪಿಯಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ. ಎ. 5ಕ್ಕೆ ಜಿಲ್ಲೆ ಹಾಗೂ ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನೆ, ಎ.7ಕ್ಕೆ ಜನಾಕ್ರೋಶ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ.
ಈ ಬಗ್ಗೆ ಮಾತನಾಡಿದ ಡಿಸಿಎಂ ಡಿಕೆಶಿ, ರೈತರಿಗೆ ಸಿಗುವ ಭೂಸ, ಹಿಂಡಿ ಸೇರಿದಂತೆ ಅಗತ್ಯ ವಸ್ತುಗಳ ಬೆಲೆಯನ್ನು ಏರಿಕೆ ಮಾಡಿದೆ. ಇದರ ಹೊರೆಯನ್ನು ತಪ್ಪಿಸಲು ಸರ್ಕಾರ ಹಾಲಿನ ದರ ಏರಿಕೆ ಮಾಡಿರುವುದು, ಇದರಿಂದ ಬಂದ ಹಣವನ್ನು ವಾಪಸ್ ರೈತರಿಗೆ ನೀಡಲಾಗುವುದು ಎಂದು ಹೇಳಿದರು.
ರೈತರಿಗೆ ಉಪಯೋಗವಾಗುವ ಕೆಲಸ ಮಾಡಿದರೆ ಬಿಜೆಪಿಗೆ ಸಹಿಸಲು ಸಾದ್ಯವಿಲ್ಲ, ಅದಕ್ಕಾಗಿಯೇ ಪ್ರತಿಭಟನೆ, ಅಹೋರಾತ್ರಿ ಧರಣಿ ಎಂದು ಮಾಡುತ್ತಿದ್ದಾರೆ. ಇದರಲ್ಲೇ ಗೊತ್ತಾಗುತ್ತದೆ ಬಿಜೆಪಿ ರೈತ ವಿರೋಧಿ ಪಕ್ಷ ಎಂದು ಗೊತ್ತಾಗುತ್ತದೆ ಎಂದು ಡಿಕೆ ಕಿಡಿಕಾರಿದರು.
ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ನಮ್ಮ ರಾಜ್ಯದಲ್ಲಿ ಎಲ್ಲಾ ವಸ್ತುಗಳ ಬೆಲೆ ಕಡಿಮೆಯಿದೆ. ನೀರಿನ ಬೆಲೆ ಕೂಡ ಒಂದು ಅಥವಾ ಅರ್ಧ ಪೈಸೆಯಷ್ಟು ಬೆಲೆ ಏರಿಕೆ ಮಾಡಲೇಬೇಕು. ಈಗಾಗಲೇ ಸಾಕಷ್ಟು ಹಣ ಬಾಕಿ ಉಳಿದಿದ್ದು, ಸಾಲ ಪಡೆಯಬೇಕಾದರೆ ಬಾಕಿ ಹಣ ಪಾವತಿಸಲೇಬೇಕಾಗಿದೆ. ಹೀಗಾಗಿ ಬೆಲೆ ಏರಿಕೆ ಮಾಡಬೇಕು ಎಂದು ಡಿಕೆ ತಿಳಿಸಿದರು.
ಜನರ ನೋವು, ಕಷ್ಟ ಎಲ್ಲವೂ ಕೂಡ ನಮಗೆ ಗೊತ್ತಾಗುತ್ತದೆ. ಆದರೆ ಎನು ಮಾಡೋದು ಬಿಜೆಪಿ ಅವರಿಗೆ ರಾಜಕೀಯ ಮಾಡಬೇಕು ಹಾಗಾಗಿ ಇಲ್ಲದಿರುವುದೆಲ್ಲ ಹೇಳಿ ಹೋರಾಟ ಅದು ಇದು ಅಂತ ಹೇಳಿ ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ನಾವು ಸದಾ ಜನಪರವಾಗಿ ಇರುತ್ತೇವೆ ಅಷ್ಟೇ ಎಂದರು.
ಸ್ಥಳೀಯ ಸಂಸ್ಥೆಗಳಿಗೆ ಶಕ್ತಿ ಕೊಡಬೇಕು, ರೈತರಿಗೆ ಅನುಕೂಲವಾಗಬೇಕು ಎಂದು ಈ ರೀತಿಯ ಕೆಲಸಗಳನ್ನು ಮಾಡುತ್ತಿದ್ದೇವೆ. ಆದರೆ ಇದರಲ್ಲಿ ಯಾವುದೇ ಮೋಸ ಮಾಡುತ್ತಿಲ್ಲ, ಇದು ಬಿಜೆಪಿಗೆ ಅರ್ಥವಾಗುತ್ತಿಲ್ಲ ಎಂದು ಡಿಕೆ ಕಿಡಿಕಾರಿದರು.