ಬೆಂಗಳೂರು : ಬಿಜೆಪಿ ಸರ್ಕಾರಕ್ಕೆ 11 ವರ್ಷ ಪೂರೈಸಿದೆ ಎನ್ನುವ ಸಂಭ್ರಮದಲ್ಲಿದೆ. ಆದರೆ ಈ 11 ವರ್ಷದಲ್ಲಿ ಬಿಜೆಪಿ ನೀಡಿದ ಯಾವ ಆಶ್ವಾಸನೆಯನ್ನು ಈಡೇರಿಸಲಿಲ್ಲ.
ಐ.ಟಿ, ಇ.ಡಿ ದಾಳಿ ನಡೆಸಿರುವುದೇ ಇವರ ದೊಡ್ಡ ಸಾಧನೆಯಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ವ್ಯಂಗ್ಯವಾಡಿದ್ದಾರೆ.
ಅವರು ಈ ಕುರಿತು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, 11 ವರ್ಷಗಳಲ್ಲಿ ಕೇಂದ್ರ ಸರ್ಕಾರ ವಿಪಕ್ಷ ನಾಯಕರನ್ನೆ ಗುರಿಯಾಗಿಸಿಕೊಂಡು ದುರುದ್ದೇಶದಿಂದ ಐ.ಟಿ, ಇಡಿ ದಾಳಿ ನಡೆಸಿರುವುದೇ ಇವರ ದೊಡ್ಡ ಸಾಧನೆಯಾಗಿದೆ. ಬಿಜೆಪಿ ಸರ್ಕಾರ ಇರುವ ರಾಜ್ಯಗಳಲ್ಲಿ ಎಷ್ಟೆ ಅಕ್ರಮ ನಡೆದರೂ ಅದರ ಗೋಜಿಗೆ ಹೋಗುತ್ತಿಲ್ಲ. ಈ ಬಗ್ಗೆ ಐ.ಟಿ, ಇ.ಡಿ ಗಮನ ವಹಿಸಬೇಕು ಎಂದು ಒತ್ತಾಯಿಸಿದರು.
ಇವರು ನೀಡಿದ ಆಶ್ವಾಸನೆಗಳು ಏನಾದವು? ವಿದೇಶದಲ್ಲಿರುವ ಕಪ್ಪು ಹಣ ವಾಪಸ್ ಬಂತಾ? ಉದ್ಯೋಗ ಸೃಷ್ಟಿ ಮಾಡಲಿಲ್ಲ. ಅಗತ್ಯ ವಸ್ತುಗಳ ಬೆಲೆ, ಡಿಸೇಲ್, ಪೆಟ್ರೋಲ್ ಮತ್ತು ಅನೀಲ ದರ ಸೇರಿದಂತೆ ಎಲ್ಲಾ ಬೆಲೆಗಳು ಗಗನಕ್ಕೇರಿವೆ. ಗಾಳಿ ಬೆಳಕು ಹೊರತುಪಡಿಸಿದರೆ, ಎಲ್ಲಾ ಪದಾರ್ಥಗಳಿಗೂ ಜಿಎಸ್‌ಟಿ ಹಾಕಿದ ಶ್ರೇಯಸ್ಸಿಗೆ ಕೇಂದ್ರ ಸರ್ಕಾರ ಪಾತ್ರವಾಗಿದೆ ಎಂದರು.
ಹಲವು ಸಾರ್ವಜನಿಕ ಕ್ಷೇತ್ರಗಳ ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ. ಖಾಸಗೀಕರಣ ಇವು ಇವರ ಕೊಡುಗೆ. ದೇಶದಲ್ಲಿ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಾಗಿದೆ.
ಸ್ವಾತಂತ್ರ್ಯ ನಂತರ ಎಲ್ಲಾ ಪ್ರಧಾನ ಮಂತ್ರಿಗಳ ಅವಧಿಯಲ್ಲಿ ದೇಶದ ಸಾಲ 52ಲಕ್ಷ ಕೋಟಿ ಇತ್ತು. ಆದರೆ ಮೋದಿ ಅವರ ಅವಧಿಯಲ್ಲಿ 150ಲಕ್ಷ ಕೋಟಿ ಸಾಲದ ಹೊರೆ ದೇಶದ ಮೇಲಿದೆ. ಸಾರ್ವಜನಿಕರ ಮೇಲೆ ಸಾಲದ ಹೊರೆ ಹೊರಿಸಿದ್ದೇ ಸಾಧನೆ ಎನ್ನಬೇಕಾ ಎಂದು ರಾಮಲಿಂಗಾರೆಡ್ಡಿ ಲೇವಡಿಯಾಡಿದ್ದಾರೆ.