ಬೆಳಗಾವಿ: ಜಿಲ್ಲೆಯ ಬೈಲಹೊಂಗಲ ತಾಲೂಕಿನ ಇನಾಮದಾರ್ ಸಕ್ಕರೆ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾವಿನ ಸಂಖ್ಯೆ ಎಂಟಕ್ಕೆ ಏರಿಕೆಯಾಗಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮತ್ತೋರ್ವ ಕಾರ್ಮಿಕ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಸಕ್ಕರೆ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟಗೊಂಡು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗೋಕಾಕ ತಾಲೂಕಿನ ಗಿಳಿ ಹೊಸೂರ ಗ್ರಾಮದ ರಾಘವೇಂದ್ರ ಗಿರಿಯಾಲ (35)ಸಾವನ್ನಪ್ಪಿದ್ದಾರೆ.
ಸಕ್ಕರೆ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟಗೊಂಡು ಎಂಟು ಕಾರ್ಮಿಕರು ಮೃತಪಟ್ಟರೂ ಈವರೆಗೂ ಸಕ್ಕರೆ ಕಾರ್ಖಾನೆ ಮಾಲೀಕರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಅಲ್ಲದೇ ಮೃತರ ಕುಟುಂಬಗಳಿಗೆ ಸೂಕ್ತ ಪರಿಹಾರವನ್ನೂ ನೀಡಿಲ್ಲ ಎಂದು ಬಡ ಕಾರ್ಮಿಕರ ಕುಟುಂಬ ಪ್ರತಿಭಟನೆ ನಡೆಸುತ್ತಿವೆ.
ಬೆಳಗಾವಿ ಚೆನ್ನಮ್ಮ ವೃತ್ತದಲ್ಲಿ ನಿನ್ನೆ ಶವವಿಟ್ಟು ಮೃತರ ಕುಟುಂಬದವರು ಪ್ರತಿಭಟನೆ ನಡೆಸಿದ್ದವು. ಇಂದೂ ಕೂಡ ಬಡ ಕಾರ್ಮಿಕರ ಕುಟುಂಬದ ಪ್ರತಿಭಟನೆ ಮುಂದುವರೆದಿದೆ.
8 ಜನರು ಸಾವನನ್ನಪ್ಪಿದ್ದಾರೆ. ಆದರೆ ಈವರೆಗೆ ಓರ್ವ ಕಾರ್ಮಿಕನಿಗೆ ಮಾತ್ರ ಪರಿಹಾರ ಘೋಷಣೆ ಮಾಡಿದ್ದಾರೆ. ಉಳಿದ ಮೃತ ಕುಟುಂಬಗಳಿಗೆ ಯಾವುದೇ ಪರಿಹಾರದ ಭರವಸೆಯನ್ನೂ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.




