ಬಾಲಿವುಡ್ ಗಾಯಕಿ ನೇಹಾ ಕಕ್ಕರ್ ಮೆಲ್ಬೋರ್ನ್‌ನಲ್ಲಿ ಆಯೋಜನೆಗೊಂಡಿದ್ದ ತಮ್ಮ ಲೈವ್ ಮ್ಯೂಸಿಕ್ ಈವೆಂಟ್ಗೆ 3 ಗಂಟೆ ತಡವಾಗಿ ತಲುಪಿ, ಪ್ರೇಕ್ಷಕರ ಅಸಮಧಾನಕ್ಕೆ ಕಾರಣರಾದರು. ಗಾಯಕಿಗಾಗಿ ಕಾದು ಕಾದು ಪ್ರೇಕ್ಷಕರು ಅಸಮಧಾನಗೊಂಡಿದ್ದರು. 3 ಗಂಟೆ ಲೇಟ್ ಆಗಿ ಆಗಮಿಸಿದ ಗಾಯಕಿ, ಈವೆಂಟ್ನಲ್ಲಿ ಹಾಜರಿದ್ದ ತಮ್ಮ ಅಭಿಮಾನಿಗಳ ಲ್ಲಿ ಅಳುತ್ತಾ ಕ್ಷಮೆಯಾಚಿಸಿರುವ ವಿಡಿಯೋ ಆನ್ಲೈನ್ನಲ್ಲಿ ವೈರಲ್ ಆಗಿದೆ.
ಪ್ರೇಕ್ಷಕರನ್ನು ಕಾಯಿಸಿದ್ದಕ್ಕೆ ಕ್ಷಮೆಯಾಚಿಸಲು ಪ್ರಯತ್ನಿಸಿದಾಗ ಗಾಯಕಿ ಅಪ್ಸೆಟ್ ಆಗಿದ್ದನ್ನು ಕಾಣಬಹುದು. “ನೀವು ನಿಜವಾಗಿಯೂ ಒಳ್ಳೆಯವರು. ಬಹಳ ತಾಳ್ಮೆಯಿಂದ ಕಾದಿದ್ದೀರಿ. ನೀವು ಬಹಳ ಹೊತ್ತಿನಿಂದ ಕಾಯುತ್ತಿದ್ದೀರ. ನನಗೆ ಕಾಯಿಸುವುದು ಇಷ್ಟವಿಲ್ಲ. ನನ್ನ ಜೀವನದಲ್ಲಿ ನಾನು ಯಾರನ್ನೂ ಕಾಯಿಸಿಲ್ಲ. ನೀವು ಬಹಳ ಹೊತ್ತಿನಿಂದ ಕಾಯುತ್ತಿದ್ದೀರ. ಕ್ಷಮಿಸಿ.. ಇಟ್ ಮೀನ್ಸ್ ಅ ಲಾಟ್ ಟು ಮಿ. ಈ ಸಂಜೆಯನ್ನು ನಾನು ಸದಾ ನೆನಪಿಸಿಕೊಳ್ಳುತ್ತೇನೆ” ಎಂದು ಗಾಯಕಿ ಪ್ರೇಕ್ಷಕರನ್ನು ಉದ್ದೇಶಿಸಿ ಮಾತನಾಡಿದರು.
ತಡವಾಗಿ ಬಂದರೂ ಸಹ ತಮ್ಮ ಅಭಿಮಾನಿಗಳನ್ನು ಮನರಂಜಿಸುವ ಭರವಸೆ ನೀಡಿದರು. “ನೀವಿಂದು ನನಗಾಗಿ ಸಮಯ ಮಾಡಿಕೊಂಡಿದ್ದೀರಿ, ನಾನು ನಿಮ್ಮೆಲ್ಲರಿಂದ ಡ್ಯಾನ್ಸ್ ಮಾಡಿಸುತ್ತೇನೆ” ಎಂದು ತಿಳಿಸಿದರು. ಗುಂಪಿನಲ್ಲಿದ್ದ ಕೆಲವರು ಗಾಯಕಿಯ ಉತ್ಸಾಹವನ್ನು ಬೆಂಬಲಿಸಿದರು, ಹುರಿದುಂಬಿಸಿದರು. ಮತ್ತೊಂದಿಷ್ಟು ಜನ ಅಸಮಧಾನಗೊಂಡರು.
ವೈರಲ್ ವಿಡಿಯೋಗಳಲ್ಲಿ, ಕೆಲ ಪ್ರೇಕ್ಷಕರು “ವಾಪಸ್ ಹೋಗಿ, ನೀವು ಉಳಿದುಕೊಂಡಿರುವ ಹೋಟೆಲ್‌ನಲ್ಲಿ ರೆಸ್ಟ್ ಮಾಡಿ” ಎಂದು ಹೇಳುತ್ತಿರುವುದನ್ನು ಕೇಳಬಹುದು. ಮತ್ತೊಬ್ಬರು, “ಇದು ಭಾರತವಲ್ಲ, ನೀವು ಆಸ್ಟ್ರೇಲಿಯಾದಲ್ಲಿದ್ದೀರಿ” ಎಂದು ಹೇಳಿದರೆ, ಇನ್ನೋರ್ವರು, “ಅತ್ಯುತ್ತಮ ನಟನೆ, ಆದ್ರಿದು ಇಂಡಿಯನ್ ಐಡಲ್ ಅಲ್ಲ. ನೀವು ಮಕ್ಕಳೊಂದಿಗೆ ಪ್ರದರ್ಶನ ನೀಡುತ್ತಿಲ್ಲ” ಎಂದು ವ್ಯಂಗ್ಯವಾಡಿದರು.